ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು | ಅಧಿಕಾರಿಗಳ ದಿಢೀರ್ ಭೇಟಿ – 37.5 ಕ್ವಿಂಟಲ್ ಅಕ್ಕಿ ವಶಕ್ಕೆ

ಬೆಳ್ತಂಗಡಿ :ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ವಶ ಪಡಿಸಿಕೊಂಡಿರುವ ಘಟನೆ ಪಣಕಜೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಗೋವಿಂದ ಸದನದ ಮನೆಯ
ಪಕ್ಕದಲ್ಲಿರುವ ಗೋಡೌನ್ ನಲ್ಲಿ ಈ ಅಕ್ರಮ ದಾಸ್ತಾನು ಸರಬರಾಜು ಆಗುತ್ತಿದ್ದು, ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಆಹಾರ ನಿರೀಕ್ಷಕರು ವಿಶ್ವ.ಕೆ ಜಂಟಿಯಾಗಿ ಸಿಬ್ಬಂದಿಗಳ ಜೊತೆ ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ.

ಅಕ್ರಮ ದಾಸ್ತಾನು ಶೇಖರಿಸಿಟ್ಟ ಮನೆಯ ಗೋಡೌನ್ ಮತ್ತು ಅಂಗಡಿಯು ಮಾಲೀಕ ಸದಾಶಿವ ಶೆಣೈ ಗೆ ಸೇರಿದ್ದಾಗಿದ್ದು, ಅವರು ವಿನಾಯಕ ರೈಸ್ ಮಿಲ್ ನಲ್ಲಿ ಕೆಲಸಕ್ಕೆ ಇರುವ ವ್ಯಕ್ತಿಯೊಬ್ಬರಿಗೆ ಬಾಡಿಗೆ ನೀಡಿದ್ದಾರೆ ಎಂದು ತನಿಖೆಯಲ್ಲಿ ವೇಳೆ ತಿಳಿಸಿದ್ದಾರೆ.

ಇನ್ನೂ ದಾಳಿ ವೇಳೆ ಗೋಡೌನ್ ನಲ್ಲಿ 14.5 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಅಶೋಕ್ ಲೆಲೈಂಡ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು, ಅಧಿಕಾರಿಗಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಪಡಿತರ ಅಕ್ಕಿ ದಾಸ್ತಾನು ಸ್ಥಳಕ್ಕೆ ತಂಡದ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಆಹಾರ ನಿರೀಕ್ಷಕ ವಿಶ್ವ.ಕೆ, ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮಸಹಾಯಕ ಗುಣಾಕರ ಹೆಗ್ಡೆ, ಅಭಿಲಾಷ್, ಚಾಲಕ ಸಂತೋಷ್ ಕುಮಾರ್, ಪುಂಜಾಲಕಟ್ಟೆ ಪಿಎಸ್ಐ ಮತ್ತು ಸಿಬ್ಬಂದಿಗಳು ಆಗಮಿಸಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ.ಕೆ ದೂರು ನೀಡಿದ್ದಾರೆ.

Leave A Reply

Your email address will not be published.