ಮತದಾರರಿಗೆ ಮಹತ್ವದ ಮಾಹಿತಿ | ಆಗಸ್ಟ್ 1ರಿಂದ ಮತದಾರರ ಪಟ್ಟಿಗೆ ಆಧಾರ್ ಕಾರ್ಡ್ ಜೋಡಣೆ

ನಕಲಿ ಮತದಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯವನ್ನು ಆಗಸ್ಟ್ 1 ರಿಂದ ಜಾರಿಗೆ ತರಲಿದೆ.

ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವವರು ಆಧಾರ್ ಸಂಖ್ಯೆಯನ್ನು ಮತದಾರರ ನೋಂದಣಾಧಿಕಾರಿಗೆ ನಮೂನೆ 6 ಬಿ ಯಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.

ಜನವರಿ 1 ಅರ್ಹತಾ ದಿನಾಂಕದಂತೆ ಬಹು ಅರ್ಹತಾ ದಿನಾಂಕಗಳು(1 ಜನವರಿ, 1 ಏಪ್ರಿಲ್, 1 ಜುಲೈ ಮತ್ತು 1 ಅಕ್ಟೋಬರ್) ಎಂದು ತಿದ್ದುಪಡಿ ಅವಕಾಶ ಕಲ್ಪಿಸಲಾಗಿದೆ. ಪರಿಷ್ಕೃತ ನಮೂನೆಗಳು ಆಗಸ್ಟ್, 1 ರಿಂದ ಜಾರಿಗೆ ಬರಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಂದ ನಮೂನೆ 6 ಬಿ ಪ್ರತಿಯಲ್ಲಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವರು. ಆಧಾರ್ ಸಂಖ್ಯೆಯನ್ನು ಹೊಂದಿರದ ಮತದಾರರು ನಮೂನೆ-6ಬಿ ಯೊಂದಿಗೆ ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ ಅಂಚೆ ಕಚೇರಿಯಲ್ಲಿ ನೀಡಿದ ಭಾವಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಆರ್ ಬಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ಪಿ.ಎಸ್.ಯು/ ಪಬ್ಲಿಕ್ ಲಿಮಿಟೆಡ್ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು/ ಶಾಸಕರು/ ಎಂಎಲ್‍ಸಿ ಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ವಿಶಿಷ್ಟ ಗುರುತಿನ ಚೀಟಿ ಸಲ್ಲಿಸಬೇಕು.

ಮತದಾರರ ನೋಂದಣಿ ನಿಯಮಗಳು 1960ರ ನಿಯಮ 13 ಮತ್ತು 26ಕ್ಕೆ ತಿದ್ದುಪಡಿ ಮಾಡಲಾಗಿದೆ. ಹೊಸ ಮತದಾರರ ನೋಂದಣಿಗಾಗಿ ನಮೂನೆ 6, ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು/ ಕೈಬಿಡಲು ಆಕ್ಷೇಪಣೆಗಾಗಿ ನಮೂನೆ 7 ಮತ್ತು ನಿವಾಸ ಸ್ಥಳಾಂತರ, ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ, ಬದಲಿ ಎಪಿಕ್ ಗಾಗಿ ಮತ್ತು ವಿಕಲಚೇತನ ಹೊಂದಿರುವ ವ್ಯಕ್ತಿಯ ಗುರುತು ಮಾಡಲು ನಮೂನೆ 8 ಅನ್ನು ಹೊಸದಾಗಿ ಮಾಡಲಾಗಿದೆ.

ಮತದಾರರು https://www.nvsp.in , https://voterportal.eci.gov.inವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಮತ್ತು ಮೊಬೈಲ್ ಆಪ್ ಮೂಲಕ ನಮೂನೆ 6 ಬಿ ಅನ್ನು ಭರ್ತಿ ಮಾಡಿ ಆಧಾರ್ ಅನ್ನು ದೃಢೀಕರಿಸಬಹುದು.

Leave A Reply

Your email address will not be published.