ಪ್ರವೀಣ್‌ ಪತ್ನಿಯಿಂದ ರಹಸ್ಯ ಮಾಹಿತಿ ಪಡೆದ ಎಡಿಜಿಪಿ| ಪ್ರವೀಣ್‌ ಮನೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್

ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿ) ಅಲೋಕ್ ಕುಮಾರ್ ಅವರು, ಪ್ರವೀಣ್ ಪತ್ನಿ ನೂತನಾ ಅವರಿಂದ ಕೆಲವೊಂದು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡರು.

ಮನೆಗೆ ಆಗಮಿಸಿದ ಅಲೋಕ್ ಕುಮಾರ್ ಅವರು ನೂತನ ಜತೆ ಮಾತನಾಡುತ್ತಿದ್ದಂತೆ, ತನಗೆ ನಿಮ್ಮ ಜತೆ ಖಾಸಗಿಯಾಗಿ ಮಾತನಾಡಬೇಕು ಎಂದು ನೂತನಾ ಇಂಗಿತ ವ್ಯಕ್ತಪಡಿಸಿದರು.

ತಕ್ಷಣ ಸಮ್ಮತಿಸಿದ ಅಲೋಕ್ ಕುಮಾರ್ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರನ್ನು ಕರೆದುಕೊಂಡು ಮನೆಯ ಕೋಣೆಯಲ್ಲಿ ನೂತನಾ ಜತೆ ಮಾತನಾಡಿದರು. ಸುಮಾರು ಹತ್ತು ನಿಮಿಷಗಳ ಕಾಲ ತನ್ನಲ್ಲಿದ್ದ ಮಾಹಿತಿಗಳನ್ನು ನೂತನಾ ಪೊಲೀಸ್‌ ಅಧಿಕಾರಿಗಳ ಜತೆ ಹಂಚಿಕೊಂಡರು.

ನಿತ್ಯ ಪತಿಯ ಚಿಕನ್ ಫಾರ್ಮ್‌ಗೆ ಬೆಳಗ್ಗೆ, ಸಂಜೆ ಹೋಗುತ್ತಿದ್ದ ನೂತನಾ ಸಂಜೆ ತನ್ನ ಕಾಲೇಜು ಕರ್ತವ್ಯ ಮುಗಿಸಿ ಬಂದ ಬಳಿಕ ರಾತ್ರಿ ಅಂಗಡಿ ಮುಚ್ಚುವವರೆಗೂ ಪತಿಯ ಜತೆ ಫಾರ್ಮ್‌ನಲ್ಲಿ ಇರುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬರುತ್ತಿದ್ದ ವ್ಯಕ್ತಿಗಳು ಮತ್ತು ರಹಸ್ಯ ಸಂಗತಿಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಹೊರಬಂದ ಅಲೋಕ್‌ ಕುಮಾರ್ ಅವರಲ್ಲಿ ಹಿಂದೂ ಸಂಘಟನೆ ಮುಖಂಡರು, ಸ್ಥಳೀಯ ಕೆಲವು ಪೊಲೀಸ್‌ ಸಿಬ್ಬಂದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಕ್ರಿಯೆ ನೀಡಿದ ಅಲೋಕ್ ಕುಮಾರ್, ಯಾವ ದಿಕ್ಕನ್ನೂ ತನಿಖೆಯಿಂದ ಹೊರಗಿಡುವುದಿಲ್ಲ. ಎಲ್ಲ ರೀತಿಯಿಂದಲೂ ಕುಟುಂಬಕ್ಕೆ ಮತ್ತು ಮೃತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಕಾನೂನು ಚೌಕಟ್ಟಿನಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.

Leave A Reply

Your email address will not be published.