ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿನಂತೆ, ಇಂದು ಮನುಷ್ಯರು ಹಣಕ್ಕಾಗಿ ದುರಾಸೆಯನ್ನೇ ಇಟ್ಟುಕೊಳ್ಳುತ್ತಾರೆ. ಅದೆಷ್ಟೇ ಆಸ್ತಿ, ಸಂಪತ್ತು ಇದ್ದರೂ, ಕಷ್ಟ ಎಂದವನ ಪಾಲಿಗೆ ಕೈ ಜೋಡಿಸದೆ ಎಲ್ಲಿ ಹೇಗೆ ಇನ್ನಷ್ಟು ಹಣ ಹೂಡಿಸೋದು ಎಂದು ಯೋಚಿಸುತ್ತಾರೆ.
ಆದರೆ, ಇಲ್ಲೊಂದು ಕಡೆ ಒಂದೊತ್ತಿನ ತುತ್ತಿಗಾಗಿ ಭಿಕ್ಷೆ ಬೇಡುತ್ತಿದ್ದವ ಇಂದು ದಾನಿಯಾಗಿದ್ದಾನೆ. ಹೌದು. ಭಿಕ್ಷೆ ಬೇಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದ ಭಿಕ್ಷುಕ ಇನ್ನೊಬ್ಬರ ಕಷ್ಟ ಅರಿತು ಅವರ ನೋವಿಗೆ ಜೊತೆಯಾಗಿದ್ದಾರೆ.
ಇವರೇ ತಮಿಳುನಾಡಿನ ತೂತುಕುಡಿಯ ನಿವಾಸಿ 72 ವರ್ಷದ ಪೂಲಪಾಂಡಿಯನ್. ಇವರ ವೃತ್ತಿಯೇ ಭಿಕ್ಷೆ ಬೇಡುವುದು. ಆದರೆ, ಇದು ಇವರಿಗಾಗಾಗಿ ಅಲ್ಲ. ಬದಲಿಗೆ ಇನ್ನೊಂದು ಬಡ ಜೀವಕ್ಕಾಗಿ.
ಇತ್ತೀಚೆಗೆ ಅಂದರೆ, ಕಳೆದ ಸೋಮವಾರ ವೆಲ್ಲೂರು ಜಿಲ್ಲಾಧಿಕಾರಿ ಬಳಿ ತೆರಳಿ 10 ಸಾವಿರ ರೂಪಾಯಿ ದಾನ ಮಾಡಿದ್ದು, ಶ್ರೀಲಂಕಾ ತಮಿಳಿಗರ ನೆರವಿಗಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ತಮಿಳಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಸೂಕ್ತ ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಉದ್ದೇಶಕ್ಕಾಗಿ ಇದುವರೆಗೂ ಇವರು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬರೋಬ್ಬರಿ 55.60 ಲಕ್ಷ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ. “ಭಿಕ್ಷಾಟನೆ ಮೂಲಕ ಸಿಗುವ ಹಣವನ್ನು ಜನರ ಅನುಕೂಲಕ್ಕೆ ಬಳಸುತ್ತೇನೆ. ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕುರ್ಚಿ ಮತ್ತು ಟೇಬಲ್ ಸೌಲಭ್ಯ ಮಾಡುತ್ತೇನೆ. ಈವರೆಗೂ 55.60 ಲಕ್ಷ ರೂಪಾಯಿ ದಾನ ಮಾಡಿದ್ದೇನೆ” ಎಂದು ಹೇಳಿದರು. ಒಟ್ಟಾರೆ ಇವರಿಗಿರೋ ಇಂತಹ ಒಳ್ಳೆಯ ಮನಸ್ಸು ಪ್ರತಿಯೊಬ್ಬರಲ್ಲೂ ಇರಲಿ ಎಂಬುದೇ ಆಶಯ..
You must log in to post a comment.