ಕಾಮನ್ ಮ್ಯಾನ್ ಬರ್ತಾರೆ, ಮಿನಿಸ್ಟರ್‌ಗೆ ಆಗಲ್ವಾ ?ಇನ್ನೂ ಸ್ಥಳಕ್ಕೆ ಧಾವಿಸದ ಶಾಸಕ, ಸಚಿವರ ಬಗ್ಗೆ ಕಾರ್ಯಕರ್ತರು, ಕುಟುಂಬಸ್ಥರ ಆಕ್ರೋಶ

ಪುತ್ತೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಖಂಡಿಸಿ ಪುತ್ತೂರಿನಾದ್ಯಂತ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಎಲ್ಲಾ ಕಡೆ ಜನ ಆಕ್ರೋಶದಿಂದ ಇದ್ದಾರೆ. ಕೆಲವು ಕಡೆ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡಾ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನ ಗೊಳ್ಳದಂತೆ ಪೊಲೀಸರು ಸೆಕ್ಷನ್ 144 ಹಾಕಿದ್ದಾರೆ.

ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ಮೆರವಣಿಗೆ ನಡೆಯಿತ್ತಿದ್ದು ಸಾವಿರಾರು ಕಾರ್ಯಕರ್ತರು ಹಾಗೂ ಹಿತೈಷಿಗಳು ಸೇರಿದ್ದಾರೆ. ಅಲ್ಲದೇ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಕೂಡಾ ಈ ಶವಯಾತ್ರೆಯಲ್ಲಿ ಪಾಲ್ಗೊ‌ಡಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಈ ನಡುವೆ ಸ್ಥಳಕ್ಕೆ ಆಗಮಿಸದ ಜನಪ್ರತಿನಿಧಿಗಳ ವಿರುದ್ಧ ಹಿಂದುತ್ವ ಸಂಘಟನೆಗಳು ಪ್ರವೀಣ್ ಮೃತದೇಹವಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಯೆದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮಂಗಳವಾರ ರಾತ್ರಿ ಕೊಲೆ ನಡೆದಿದೆ. ಬೆಂಗಳೂರಿನಲ್ಲಿರುವುದಾಗಿ ಹೇಳಿದ್ದ ಜನಪ್ರತಿನಿಧಿಗಳು ಬೆಳಗ್ಗೆಯಾದರೂ ಅಲ್ಲಿಂದ ಹೊರಟಿಲ್ಲ ಎಂಬ ಮಾಹಿತಿ ಅಲ್ಲಿ ನರೆದಿದ್ದ ಗುಂಪು ಕೇಳಿದ್ದು, ಜನಾಕ್ರೋಶ ಹೆಚ್ಚಾಯಿತು. ರಾತ್ರಿಯೇ ಮಾಹಿತಿ ಸಿಕ್ಕಿದ್ದರೂ ಬೆಂಗಳೂರಿನಿಂದ ಇನ್ನೂ ಏಕೆ ಹೊರಟಿಲ್ಲ? ಅವರೇನು ನಮ್ಮನು ಮಂಗ ಮಾಡುತ್ತಿದ್ದಾರ? ಎಲ್ಲವೂ ಓಟಿಗಾಗಿ ಮಾಡುವುದು. ಅವರಿಗಾಗಿ ನಾವು ಕಾಯುವುದಿಲ್ಲ. ಹೆಣವನ್ನು ಮುಂದಿಟ್ಟು ಅವರು ಶೋ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು ಮೃತದೇಹದ ಮೆರವಣಿಗೆ ಆರಂಭಿಸಿದ್ದಾರೆ.

ಇಲ್ಲಿಯವರೆಗೆ ರಾಜ್ಯದ ಯಾವುದೇ ಶಾಸಕರಾಗಿರಬಹುದು, ಸಚಿವರಾಗಿರಬಹುದು ಘಟನಾ ಸ್ಥಳಕ್ಕೆ ಬಂದು ಕುಟುಂಬಸ್ಥರಿಗೆ, ಕಾರ್ಯಕರ್ತರಿಗೆ ಸಾಂತ್ವನದ ಮಾತುಗಳನ್ನು ಆಡಿಲ್ಲ. ಈ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಅಷ್ಟು ಮಾತ್ರವಲ್ಲ ದುಃಖದ ಮಡುವಿನಲ್ಲಿರುವ ಕುಟುಂಬಸ್ಥರು ಕೂಡಾ ಆಕ್ರೋಶ ಗೊಂಡಿದ್ದಾರೆ. ಮೊದಲೇ ಹೊತ್ತಿ ಉರಿಯುವ ಈ ಸಂದರ್ಭದಲ್ಲಿ ನಾಯಕರುಗಳ ಈ ನಡೆ ಬೆಂಕಿಗೆ ತುಪ್ಪ ಹಾಕಿದಂತೆ ಎಂದೇ ಹೇಳಬಹುದು. ಬಿಜೆಪಿಯ ನಾಯಕರುಗಳು ಸ್ಥಳಕ್ಕೆ ಬಂದು ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಕುಟುಂಬಸ್ಥರಿಗೆ ಹಾಗೂ ಕಾರ್ಯಕರ್ತರಿಗೆ ಭರವಸೆಯ ಒಂದು ಮಾತು ಹೇಳಿದರೆ ಉದ್ವಿಗ್ನ ಸ್ಥಿತಿ ತಹಬದಿಗೆ ಬರಬಹುದೇನೋ.

Leave A Reply

Your email address will not be published.