ಮಂಗಳೂರು : ನಾನ್ ವೆಜ್ ಪ್ರಿಯರಿಗೆ ಢಬಲ್ ಧಮಾಕ | ಕೋಳಿ ಮಾಂಸ, ಮೊಟ್ಟೆ ದರದಲ್ಲಿ ಭಾರೀ ಇಳಿಕೆ

10 ದಿನಗಳ ಹಿಂದೆ ಕರಾವಳಿಯಲ್ಲಿ ಗಗನಕ್ಕೇರಿದ್ದ ಕೋಳಿ ಮಾಂಸದ ದರ ತೀವ್ರ ಕುಸಿತ ಕಂಡಿದೆ. ಇದರ ಜೊತೆಗೆ ಮೊಟ್ಟೆ ಬೆಲೆಯೂ ಇಳಿದಿದೆ. ಹಾಗಾಗಿ ನಾನ್ ವೆಜ್ ಪ್ರಿಯರಿಗೆ ಖುಷಿಯ ವಿಷಯವೆಂದೇ ಹೇಳಬಹುದು.

10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಮಾಂಸ ಸ್ಕಿನ್‌ಲೆಸ್ ಕೆಜಿಗೆ 240 ರೂ. ಇತ್ತು. ವಿತ್‌ಸ್ಕಿನ್ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು. ಜು. 24ರಂದು ಸ್ಕಿನ್‌ ಲೆಸ್ ಕೆಜಿಗೆ 155 ರೂ. ಇದ್ದರೆ ವಿತ್‌ಸ್ಕಿನ್ 135 ರೂ. ಆಸುಪಾಸಿನಲ್ಲಿದೆ. ಜೀವಂತ ಕೋಳಿ ಕೆಜಿಗೆ 105 ರೂ. ವರೆಗೆ ಕುಸಿದಿದೆ. 6.50 ರೂ.ಗೆ ಮಾರಾಟವಾಗುತ್ತಿದ್ದ ಮೊಟ್ಟೆ ಮೊಟ್ಟೆಯ ದರವೂ ಇಳಿದಿದ್ದು 5.50 ರೂ.ಗೆ ಇಳಿದಿದೆ. ವಾರದಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಮಳೆಗಾಲ ಆರಂಭದ ನಂತರ ಆಷಾಢ ಪ್ರಾರಂಭವಾಗುತ್ತಿದ್ದಂತೆಯೇ, ಬೆಲೆ ಇಳಿಕೆ ಆಗುವುದು ಸಾಮಾನ್ಯ. ನಂತರ ಶ್ರಾವಣ ಮಾಸ ಬರುವುದರಿಂದ ಇಡೀ ರಾಜ್ಯದಲ್ಲಿ ಕೋಳಿಯ ದರ ಕಡಿಮೆಯಾಗುವುದು ಸಹಜ. ಅಷ್ಟು ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ತಾಜಾ ಮೀನು ಕೂಡ ಸಿಗುತ್ತಿರುವುದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆ. ಕೋಳಿ ವ್ಯಾಪಾರಿಗಳು ಹೇಳುವ ಪ್ರಕಾರ, ದರ ಏರಿಕೆಗೆ ಡಿಸೆಂಬರ್ ವರೆಗೆ ಕಾಯಬೇಕು. ಅಲ್ಲಿಯವರೆಗೆ ದರದಲ್ಲಿ ಇಳಿಕೆ ಇರಬಹುದು ಎಂದಿದ್ದಾರೆ.
ಬೇಸಗೆಯಲ್ಲಿ ಮದುವೆ, ಕೋಲ, ತಂಬಿಲ ಸಹಿತ ಶುಭ ಕಾರ್ಯಗಳ ಸಂದರ್ಭ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ದರವೂ ವಿಪರೀತ ಏರಿಕೆಯಾಗುತ್ತದೆ.

ಮಾರುಕಟ್ಟೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾದಾಗ ಬೆಲೆ ಇಳಿಸುತ್ತಾರೆ. ಬೇಡಿಕೆ ಹೆಚ್ಚಾದಾಗ ಬೆಲೆ ಹೆಚ್ಚಿಸುತ್ತಾರೆ. ಮಾಂಸ ಮತ್ತು ಮೊಟ್ಟೆಯ ದರ ಪ್ರತೀ ದಿನ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಕೋಳಿ ದರ ವಿಪರೀತ ಇಳಿದಾಗ ಅದು ನಮ್ಮಂತಹ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟವನ್ನುಂಟು ಮಾಡುತ್ತದೆ ಎನ್ನುತ್ತಾರೆ ಕೋಳಿ ವ್ಯಾಪಾರಿಗಳು.

ಕೋಳಿ ಮತ್ತು ಕೋಳಿ ಮಾಂಸಕ್ಕೆ ಬೆಂಗಳೂರು, ಮೈಸೂರು, ಕರಾವಳಿ ಜಿಲ್ಲೆಯಲ್ಲಿ ಭಾರೀ ಬೇಡಿಕೆ. ಉಡುಪಿ ಜಿಲ್ಲೆಯ ಬೇಡಿಕೆಯ ಬಹುಪಾಲು ಹುಬ್ಬಳ್ಳಿ, ಹಾಸನ, ಬೆಂಗಳೂರು, ತಮಿಳುನಾಡು, ದಾವಣಗೆರೆ ಜಿಲ್ಲೆಗಳಿಂದ ಪೂರೈಕೆಯಾಗುತ್ತದೆ.

Leave A Reply

Your email address will not be published.