ಭಾರೀ ಮಳೆಗೆ ಚರಂಡಿಯಲ್ಲಿ ಸಿಲುಕಿಕೊಂಡ ಸ್ಕೂಲ್ ಬಸ್, ಸಂಕಷ್ಟದಲ್ಲಿದ್ದ ಎರಡು ಡಜನ್ ಗೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ಸ್ಥಳೀಯರು

ಭಾರೀ ಮಳೆಯ ನಡುವೆ ಶಾಲಾ ಬಸ್ ವೊಂದು ಚರಂಡಿಯಲ್ಲಿ ಸಿಲುಕಿಕೊಂಡ ಘಟನೆಯೊಂದು ನಡೆದಿದ್ದು, ಶಾಲಾ ಮಕ್ಕಳು ಭಯಭೀತರಾಗಿ, ಸಹಾಯಕ್ಕಾಗಿ ಕೂಗುತ್ತಿರುವ ಮನಕಲಕುವ ವೀಡಿಯೋವೊಂದು ವೈರಲ್ ಆಗಿದೆ.

ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಭಾರೀ ಮಳೆಯ ನಡುವೆ ನಿನ್ನೆ ಎರಡು ಡಜನ್‌ಗೂ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ದೊಡ್ಡ ಚರಂಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಕಂಡ ಗ್ರಾಮಸ್ಥರ ಗುಂಪು ಟ್ರ್ಯಾಕ್ಟರ್ ಮತ್ತು ಹಗ್ಗವನ್ನು ಬಳಸಿ ದೊಡ್ಡ ಚರಂಡಿಯಿಂದ ಬಸ್ಸನ್ನು ಹೊರತೆಗೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಕೆಲವು ಕಡೆ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದರ ಮಧ್ಯೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಬಸ್ಸೊಂದು ಚರಂಡಿಯಲ್ಲಿ ಸಿಲುಕಿಕೊಂಡಿದೆ. ಇಷ್ಟು ಮಾತ್ರವಲ್ಲದೇ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಬಸ್‌ನೊಳಗೆ ನೀರು ನುಗ್ಗಿದೆ. ಹೀಗಾಗಿ, ಮಕ್ಕಳು ಸಹಾಯಕ್ಕಾಗಿ ಕೂಗುತ್ತಿರುವುದು ಸ್ಥಳೀಯರಿಗೆ ಕೇಳಿಸಿದೆ. ಕೂಡಲೇ ಅಲ್ಲಿಗೆ ಬಂದ ಜನರು ಬಸ್ಸಿನಲ್ಲಿದ್ದ ಎಲ್ಲಾ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ್ದಾರೆ. ಇದೀಗ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ನೀಡಿದೆ.

Leave A Reply

Your email address will not be published.