ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಶಿಕ್ಷಣ ಇಲಾಖೆಯಿಂದ ಅನುಮೋದನೆ

ರಾಜ್ಯದ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. 

2022-23 ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ 6,601 ಸರ್ಕಾರಿ ಶಾಲೆ ಮತ್ತು 1,500 ಪದವಿ ಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣದ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 992.16 ಕೋಟಿ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

2022-23 ನೇ ಸಾಲಿಗೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ, 2022-23 ನೇ ಸಾಲಿನ ಯು-ಡೈಸ್/ ಸ್ಯಾಟ್ಸ್‌, ಅಂಕಿ ಅಂಶಗಳ ಪ್ರಕಾರ ತುರ್ತಾಗಿ 6,601 ಸರ್ಕಾರಿ ಶಾಲಾ ಕೊಠಡಿಗಳ ಆವಶ್ಯಕತೆ ಇರುವ ಬಗ್ಗೆ ಮಾಹಿತಿಯನ್ನು ಪಡೆದಿದ್ದು, 3,616 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳಿಗೆ ಘಟಕ ವೆಚ್ಚ ರೂ.13.90 ಲಕ್ಷಗಳಂತೆ, 2,985 ಸರ್ಕಾರಿ ಪ್ರೌಢಶಾಲಾ ಕೊಠಡಿಗಳಿಗೆ ಘಟಕ ವೆಚ್ಚ 16.40 ಲಕ್ಷಗಳಂತೆ, ಒಟ್ಟು 6,601 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ರೂ. 992.16 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕುಷವಾಗಿ ಪರಿಶೀಲಿಸಿ, ಪದವಿ ಪೂರ್ವ ಕಾಲೇಜುಗಳಲ್ಲೂ ಸಹ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವುದನ್ನು ಪರಿಗಣಿಸಿ ಈ ಆದೇಶವನ್ನು ನೀಡಲಾಗಿದೆ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ. ಕಾಮಗಾರಿ ಸಮಯದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಮಗಾರಿ ಪ್ರಾರಂಭಕ್ಕೂ ಮುನ್ನ, ವಿವಿಧ ಹಂತದ ಫೋಟೋಗಳನ್ನು ಇಲಾಖೆಯ ಸ್ಯಾಟ್ಸ್ ತಂತ್ರಂಶದಲ್ಲಿ ಹಂತ ಹಂತವಾಗಿ ಅಪ್ ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.

2022ನೇ ವರ್ಷದ ಅಂತ್ಯದೊಳಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸತಕ್ಕದ್ದು ಎಂದು ತಿಳಿಸಿದೆ. ಭರಿಸಲಾದ ವೆಚ್ಚಕ್ಕೆ ಶಾಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆಯುಕ್ತರು, ಸಾರ್ವಜನಿಕ -ಶಿಕ್ಷಣ ಇಲಾಖೆ, ಬೆಂಗಳೂರು ಹಾಗೂ ಕಾಲೇಜು ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು, ಸೂಕ್ತ ಲೆಕ್ಕ ಪತ್ರಗಳನ್ನು ಇಡತಕ್ಕದ್ದು.

Leave A Reply

Your email address will not be published.