ಬದುಕು ಅಂದ ಮೇಲೆ ಪ್ರತಿಯೊಬ್ಬರಿಗೂ ಆಸೆ, ಆಕಾಂಕ್ಷೆ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಅದನ್ನೇ ಗುರಿಯಾಗಿಸಿಕೊಂಡು ನನಸಾಗಿಸುತ್ತಾರೆ. ಆದ್ರೆ, ಇನ್ನೊಂದಷ್ಟು ಜನಕ್ಕೆ ಅದು ಅಸಾಧ್ಯವಾಗಿ ಬಿಡುತ್ತೆ. ಪ್ರತಿಯೊಬ್ಬರಿಗೂ ತಾನೂ ಸಾಯೋ ಮುಂಚೆ ಒಮ್ಮೆ ನಾ ಕಂಡ ಕನಸು ನನಸಾಗಲಿ ಎಂಬುದೇ ಹಂಬಲ.
ಅದೇ ರೀತಿ ಇಲ್ಲೊಂದು ಕಡೆ, ಮನ ಕರಗುವಂತಹ ಘಟನೆ ನಡೆದಿದೆ. ಹೌದು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇಬ್ಬರು ಪುಟ್ಟ ಬಾಲಕರಿಗೆ ಪೊಲೀಸ್ ಅಧಿಕಾರಿಯಾಗುವ ಆಸೆ. ಇದನ್ನರಿತ ಬೆಂಗಳೂರು ಪೊಲೀಸರು ಅವರ ಕನಸನ್ನು ನನಸು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೇರಳದ ಮೊಹಮ್ಮದ್ ಸಲ್ಮಾನ್ ಮತ್ತು ಬೆಂಗಳೂರಿನ ಮಿಥಿಲೇಶ್ ಕ್ಯಾನ್ಸರ್ನಿಂದ ತೀವ್ರ ಅಸ್ವಸ್ಥರಾಗಿದ್ದು, ಹೋರಾಡುತ್ತಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಗಳಾಗುವ ಕನಸು. ಆ ಕನಸನ್ನು ಒಂದು ದಿನದ ಮಟ್ಟಿಗಾದರೂ ಪೂರೈಸಲು ಪೊಲೀಸರು ನಿರ್ಧರಿಸಿ, ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಅವರನ್ನು ಕೆಲವು ಗಂಟೆಗಳ ಕಾಲ ಡಿಸಿಪಿ ಮಾಡಿದ್ದಾರೆ.
ಚಿಕ್ಕ ಹುಡುಗರೂ ಸಮವಸ್ತ್ರ ಧರಿಸಿ ಡಿಸಿಪಿ ಕಚೇರಿಯಲ್ಲೇ ಕುಳಿತಿರುವ ಫೋಟೋವನ್ನು, ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿಕೆ ಬಾಬಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಕಠಿಣ ಕಾಯಿಲೆಯ ವಿರುದ್ಧ ಹೋರಾಡುವ ಧೈರ್ಯಶಾಲಿ ಮಕ್ಕಳ ಆಸೆಯನ್ನು ಈಡೇರಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದೇವೆ ಎಂದು ಒಕ್ಕಣೆ ಬರೆದಿದ್ದಾರೆ.
“ಮಾನವೀಯತೆಯು ನಾವು ಹೊಂದಿರುವ ಯಾವುದೇ ಸ್ಥಾನಕ್ಕಿಂತ ಮೇಲಿದೆ. ಸಮಾಜದ ಕಡೆಗೆ ನಿಮ್ಮ ಮಹತ್ತರವಾದ ಕೆಲಸಕ್ಕಾಗಿ ಅಭಿನಂದನೆಗಳು” ಎಂದು ಒಬ್ಬ ಟ್ವೀಟಿಗರು ಶ್ಲಾಘಿಸಿದ್ದಾರೆ. “ಹ್ಯಾಟ್ಸ್ ಆಫ್ ಸರ್, ಎಂಥ ಅದ್ಭುತ ಕೆಲಸ’ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ಬಾಲಕರ ಭವಿಷ್ಯದ ಕನಸು ನನಸು ಮಾಡಿದ ಹೆಮ್ಮೆ ಪೊಲೀಸ್ ಅಧಿಕಾರಿಯವರದಾಗಿದೆ.
You must log in to post a comment.