ಇನ್ನೇನು ಕೆಲ ಗಂಟೆಗಳಲ್ಲಿ ಆರೋಪಿಗಳ ಬೇಟೆಯಾಡಲಿದ್ದ ಪೊಲೀಸರ ದುರಂತ ಅಂತ್ಯ!! ಭೀಕರ ಅಪಘಾತಕ್ಕೆ ಎಸ್.ಐ ಸಹಿತ ಸಿಬ್ಬಂದಿ ಸಾವು-ಮೂವರು ಗಂಭೀರ

ಬೆಂಗಳೂರು: ಗಾಂಜಾ ಗ್ಯಾಂಗ್ ಒಂದನ್ನು ಬಂಧಿಸುವ ಸಲುವಾಗಿ ಆಂಧ್ರ ಪ್ರದೇಶದತ್ತ ಹೊರಟಿದ್ದ ಪೊಲೀಸರಿದ್ದ ಕಾರೊಂದು ಅಪಘಾತಕ್ಕೀಡಾಗಿ ಪೊಲೀಸರ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಸಿಬ್ಬಂದಿಗಳು ಗಾಯಗೊಂಡ ಘಟನೆಯೊಂದು ಚಿತ್ತೂರು ತಿರುಮಲ ರಸ್ತೆಯ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೇ ಕೆಳ ಸೇತುವೆಯ ಬಳಿ ನಡೆದಿದೆ.

ಮೃತರನ್ನು ಬೆಂಗಳೂರಿನ ಶಿವಾಜಿನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಸಿಬ್ಬಂದಿ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪ್ರೊಬೆಷನರಿ ಎಸ್.ಐ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಶಿವಾಜಿ ನಗರ ಠಾಣಾ ಪೊಲೀಸರ ತಂಡವು ಗಾಂಜಾ ಗ್ಯಾಂಗ್ ಒಂದನ್ನು ಹೆಡೆಮುರಿಕಟ್ಟಲು ಖಾಸಗಿ ಕಾರೊಂದನ್ನು ಕರೆಸಿ ಆಂಧ್ರಪ್ರದೇಶದತ್ತ ಹೊರಟಿತ್ತು. ಆಂಧ್ರ ಪ್ರದೇಶದ ಚಿತ್ತೂರು ಬಳಿಯಲ್ಲಿ ಆರೋಪಿಗಳಿರುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಚರಣೆ ಆರಂಭಗೊಂಡಿತ್ತು. ಆದರೆ ಆ ಪ್ರದೇಶದಲ್ಲಿ ಆರೋಪಿಗಳು ಪತ್ತೆಯಾಗದ ಕಾರಣ ಪೊಲೀಸರ ತಂಡವು ಇನ್ನೊಂದು ಕಡೆಗೆ ತೆರಳಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿಕಟ್ಟಲಿದ್ದ ಪೊಲೀಸರ ಸಾವಿನ ಸುದ್ದಿ ತಿಳಿದ ಇಲಾಖೆ ಮರುಗಿದ್ದು, ತಮ್ಮ ಸಿಬ್ಬಂದಿಗಳನ್ನು ಕಳೆದುಕೊಂಡ ಪೊಲೀಸರ ತಂಡವು ಘಟನಾ ಸ್ಥಳಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.

Leave A Reply