ಬೆಳ್ತಂಗಡಿ : ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ | ಯುವಕರ ತಂಡವೊಂದರಿಂದ ಇರ್ವರ ಮೇಲೆ ಮಾರಣಾಂತಿಕ ಹಲ್ಲೆ, ಓರ್ವ ಸಾವು!!!

ಬೆಳ್ತಂಗಡಿ : ತಾಲೂಕಿನಲ್ಲಿ ನಾಲ್ಕು ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯುವಕರ ತಂಡವೊಂದು ಓರ್ವನ ಮೇಲೆ ಮಾರಾಣಾಂತಿಕ ಹಲ್ಲೆಗೆ ಮುಂದಾಗಿದ್ದು, ಹಾಗೂ ಹಲ್ಲೆ ತಡೆಯಲು ಬಂದ ವ್ಯಕ್ತಿಯ ಸಂಬಂಧಿಕನೊಬ್ಬನ ಮೇಲೂ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಆದರೆ ಇಬ್ಬರು ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಓರ್ವ ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆಯೊಂದು ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಘಟನೆ ವಿವರ : ನಾರಾಯಣ ನಾಯ್ಕ (47) ಎಂಬವರು ಎಂದಿನಂತೆ ಬೀಡಿ ಕೊಟ್ಟು ವಾಪಸ್ ಬರುವ ಸಂದರ್ಭದಲ್ಲಿ, ಶಾಂತಿನಗರ ಆಟದ ಮೈದಾನದಲ್ಲಿದ್ದ ಯುವಕರ ಗುಂಪೊಂದು ಬಂದು, ನಾಲ್ಕು ವರ್ಷದ ಬಾಲಕಿಯೋರ್ವಳ ಮೇಲೆ ನೀನು ಅತ್ಯಾಚಾರ ಮಾಡಿದ್ದೀಯಾ ಎಂದು ಹೇಳಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡ ಈತನ ಸಂಬಂಧಿಕ ಜಾರಪ್ಪ ನಾಯ್ಕ (55) ಎಂಬುವವರು ಈ ಹಲ್ಲೆಯನ್ನು ತಪ್ಪಿಸಲು ಮುಂದೆ ಬಂದಾಗ ಅವರ ಮೇಲೂ ಈ ತಂಡ ಒಟ್ಟು ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.

ತೀವ್ರವಾಗಿ ಗಾಯಗೊಂಡಿದ್ದ ಜಾರಪ್ಪ ನಾಯ್ಕ ಮತ್ತು ನಾರಾಯಣ ನಾಯ್ಕ ಇಬ್ಬರು ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಇವರ ಮನೆ ಮಂದಿಗೆ ಮಾಹಿತಿ ತಿಳಿಸಿದ್ದಾರೆ. ಜಾರಪ್ಪ ಅವರ ಮೊದಲ ಮಗ ರಾಜಶೇಖರ್ ಕೂಡಲೇ ಸ್ಥಳಕ್ಕೆ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆಯೇ, ಹೃದಯಾಘಾತದಿಂದ ಜಾರಪ್ಪ ನಾಯ್ಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಾರಾಯಣ ನಾಯ್ಕ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜಾರಪ್ಪ ನಾಯ್ಕ ಅವರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಊರಿನ ಸ್ಥಳೀಯ ನಿವಾಸಿಗಳಾದ ಮನೋಹರ್, ಚಂದ್ರಕಾಂತ್ ನಾಯ್ಕ, ದೀಪಕ್ ರೈ, ಹರಿಪ್ರಸಾದ್, ವಿಜಯ್ ,ವೈಶಾಲಿ ಮತ್ತಿತರರು ಇವರಿಬ್ಬರ ಮೇಲೆ ಹಲ್ಲೆ ಮಾಡಿದವರು ಎನ್ನಲಾಗಿದೆ. ಆಸ್ಪತ್ರೆಗೆ ಬಿಜೆಪಿ ಯುವ ಮೋರ್ಚಾ ಸದಸ್ಯರಾದ ಪ್ರಶಾಂತ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾಜ್ ಮತ್ತಿತರರು ಭೇಟಿ ನೀಡಿದ್ದಾರೆ.

ಈ ಘಟನೆ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹೊಂದಿದ ಜಾರಪ್ಪ ನಾಯ್ಕ ಅವರ ಮಗ ರಾಜಶೇಖರ್ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply