ವಿವೇಕಾನಂದ ಕಾಲೇಜಿನಲ್ಲಿ ಸಿ ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಪುತ್ತೂರು, ಜು 22: ಸಿ.ಎ ಎನ್ನುವುದು ಕಷ್ಟಕರವಲ್ಲ, ಒಂದು ವಿಭಿನ್ನ ವೃತ್ತಿಪರ ಶಿಕ್ಷಣ. ಜ್ಞಾನದಲ್ಲಿ ಮಾಡಿದ ಹೂಡಿಕೆ ಹಾಗೂ ಶಿಕ್ಷಣದ ಮೇಲೆ ಮಾಡಿದ ಸಮರ್ಪಣೆ ಜೀವನದ ಗುರಿಯನ್ನು ಸಾಧಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಲೇಖ್ ಪಾಲ್ ಸಂಸ್ಥೆಯ ಸ್ಥಾಪಕ ಹಾಗೂ ವೃತ್ತಿಪರ ಶಿಕ್ಷಣದ ಉಪನ್ಯಾಸಕ ರಾಜ್ ಗಣೇಶ್ ಕಾಮತ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಸಂಘ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಿ. ಎ ವೃತ್ತಿಪರ ಶಿಕ್ಷಣದ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಿ.ಎ ಯಂತಹ ವೃತ್ತಿಪರ ಕೋರ್ಸುಗಳು ಸಾಕಷ್ಟು ವೆಚ್ಚವಿಲ್ಲದ ಹಾಗೂ ಸುಲಭವಾದ ಕೋರ್ಸ್. ನಿರಂತರ ಪರಿಶ್ರಮದಿಂದ ಮಾತ್ರ ಇಂತಹ ಕೋರ್ಸುಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೈಗೆಟಕುವ ಕೋರ್ಸ್ ಕೂಡ ಆಗಿದೆ. ಹಿಂದೆ ಸಿ ಎ ಮಾಡಲು ಹಲವರಿಗೆ ಆಸಕ್ತಿ ಇತ್ತಾದರೂ ಮಾಹಿತಿ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಇಂದು ಇದರ ಮಾಹಿತಿ ಮತ್ತು ತರಬೇತಿ ಕಾಲೇಜಿನಲ್ಲಿ ದೊರೆಯುತ್ತಿದ್ದು ಖುಷಿಯ ವಿಚಾರ. ಇಂದಿನ ಜಿಎಸ್‌ಟಿ ಯುಗದಲ್ಲಿ ಸಿ.ಎ ಕೋರ್ಸುಗಳಿಗೆ ಬಹು ಬೇಡಿಕೆಯಿದೆ ಮಾತ್ರವಲ್ಲದೆ ಜೀವನವನ್ನು ನಂದನಗೊಳಿಸಲು ಉಜ್ವಲ ಅವಕಾಶವಿದೆ. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ತಾವೇ ಬೆಳೆಸಬೇಕು ಎಂದರು. ಇದೇ ಸಂದರ್ಭದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು, ಆಯ್ಕೆಗಳು ಹಾಗೂ ಸಿ. ಎ ವೃತ್ತಿಪರ ಶಿಕ್ಷಣದ ಕುರಿತು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್, ಪ್ರಾಂಶುಪಾಲ ಮಹೇಶ ನಿಟಿಲಾಪುರ ಹಾಗೂ ಕಾಲೇಜಿನ ವಾಣಿಜ್ಯ ಸಂಘದ ಸಂಯೋಜಕಿ ಉಷಾ ಎ. ಎಮ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೀಪಶ್ರೀ, ಸಿಂಧೂರ ಮತ್ತು ಶರಣ್ಯ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಿಶ್ಚಿತಾ ಎನ್ ಸ್ವಾಗತಿಸಿ, ಇಷಾ ಸುಲೋಚನಾ ವಂದಿಸಿದರು. ವಿದ್ಯಾರ್ಥಿನಿ ತನುಷಾ ಸಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave A Reply

Your email address will not be published.