ಬೆಳ್ಳಾರೆ : ಮಸೂದ್ ಕೊಲೆಯತ್ನ ಪ್ರಕರಣ : ಎಲ್ಲಾ ಆರೋಪಿಗಳ ಬಂಧನ

ಸುಳ್ಯ : ಜು.19ರ ತಡರಾತ್ರಿ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜದಲ್ಲಿ ಬಾಟಲಿಯಿಂದ ಯುವಕನೊಬ್ಬನ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಒಟ್ಟು ಎಂಟು ಮಂದಿ ಕೃತ್ಯ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು, ಕೃತ್ಯ ನಡೆದ 18 ಗಂಟೆಯೊಳಗಡೆ ಎಲ್ಲಾ 8 ಅರೋಪಿಗಳನ್ನು ಬಂಧಿಸಿದಂತಾಗಿದೆ.

ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್,
ಸದಾಶಿವ ಪೂಜಾರಿ,ಜಿಮ್ ರಂಜಿತ್, ಹಾಗೂ ಭಾಸ್ಕರ ಬಂಧಿತರು.

ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ (18 ವರ್ಷ) ಹಲ್ಲೆಗೊಳಗಾದಾತ. ಈತನಿಗೆ ಸದ್ಯ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಮಸೂದ್ ತಿಂಗಳ ಹಿಂದೆಯಷ್ಟೇ ಕಾಸರಗೋಡಿನಿಂದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ರಿ ಎಂಬವರ ಮನೆಗೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದ.ಜು.19ರ ಸಂಜೆ ವೇಳೆ ಮಸೂದ್ ಹಾಗೂ ಆರೋಪಿಗಳ ಪೈಕಿ ಸುಧೀರ್ ಎಂಬಾತನ ಜತೆ ಗಲಾಟೆಯಾಗಿತ್ತು.ಈ ವೇಳೆ ಮಸೂದ್ ಸುಧೀರ್ ಗೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ ಎಂಬ ದ್ವೇಷದಿಂದ ಸುಧೀರನು ತನ್ನ ಸ್ನೇಹಿತರನ್ನು ಒಟ್ಟುಗೂಡಿಸಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಉಪಾಯವಾಗಿ ಮನೆಯಿಂದ ಕರೆಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಮಸೂದ್ ಜತೆಗಿದ್ದ ಪೆರುವಾಜೆ ಗ್ರಾಮದ ಪೆಲತ್ತಡ್ಕದ ಶಾನೀಫ್ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು . ಈ ಹಿನ್ನಲೆಯಲ್ಲಿ ಎಲ್ಲ ಅಎಂಟು ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ ಪೇಟೆಯಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಗಸ್ತಿನಲ್ಲಿ ನಿರತರಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿದೆ

Leave A Reply

Your email address will not be published.