ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್!

ಕಲಬುರಗಿ : ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸಲು ಹೆಚ್ಚು ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಮಾತನಾಡಿದ್ದು, ಅವರು ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಸಾರಿಗೆ ಇಲಾಖೆಯಲ್ಲಿ 635 ಹುದ್ದೆಗಳ ಪೈಕಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಎಲೆಕ್ಟ್ರಿಕ್ ಬಸ್ ಸೇರಿ 1,500 ಕ್ಕೂ ಹೆಚ್ಚು ಬಸ್ ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ 9-10 ವರ್ಷದಿಂದ ಬಸ್‍ಗಳು ಓಡುತ್ತಿದ್ದು ಹಳೆಯದಾಗಿವೆ. ಹೀಗಾಗಿ ಹೊಸದಾಗಿ ಬಸ್ ಖರೀದಿಗೆ ನಿರ್ಧರಿಸಿದೆ ಎಂದು ಸಾರಿಗೆ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇದರ ಮಧ್ಯೆ ಆರ್.ಟಿ.ಒ. ಕಚೇರಿಯಲ್ಲಿ ಕಲಿಕಾ ಪರವಾನಗಿ, ನವೀಕರಣ ಹೀಗೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ವ್ಯವಹರಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲಿ ಕುಳಿತು ಆನ್‍ಲೈನ್ ಮೂಲಕ ಸೇವೆ ಪಡೆಯಬಹುದಾಗಿದೆ. ಇಂತಹ ಸುಧಾರಣಾ ಕ್ರಮ ತಂದಿರುವುದಕ್ಕೆ ತಮಗೆ ತೃಪ್ತಿ ಇದೆ ಎಂದು ಸಚಿವರು ಹೇಳಿದರು. ಅಲ್ಲದೆ, ಹಳದಿ ಬೋರ್ಡ್​ವುಳ್ಳ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.

Leave A Reply

Your email address will not be published.