Viral News । ಇಡ್ಲಿ ವಡೆ ದೋಸೆಗೆ ಹೊಸ ನಾಮಕರಣ ಮಾಡಿದ ಅಮೇರಿಕನ್ ಹೋಟೆಲ್ । ‘ ನಗ್ನ ಬಟ್ಟೆ ‘ ಅಂದ್ರೆ ಯಾವ ತಿಂಡಿ ಇರ್ಬೋದು ಊಹಿಸಿ !

ಭಾರತೀಯ ಆಹಾರ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದೂ ಮುಂಜಾನೆಯ ಸಮಯದಲ್ಲಿ ಒಂದು ಸ್ಮೂತ್ ಆಹಾರ ಇಷ್ಟ ಪಡುವ ಮಂದಿಗೆ ಮೊದಲ ಆಯ್ಕೆ ಇಡ್ಲಿ. ಜತೆಗೆ ಸಾಂಬಾರ್, ತೆಂಗಿನ ಕಾಯಿಯ ಚಟ್ನಿ. ಅದರ ಮೇಲೆ ಒಂದು ಗರಿ ಗರಿ ವಡೆ ಮಡಗಿದರೆ, ಧನ್ಯೋಸ್ಮಿ !
ಅದರಲ್ಲಿಯೂ ವಿಶೇಷವಾಗಿ ನಿಮಗೆ ದೇಶದ ಹೊರಗಡೆ ಹೋದಾಗ ಭಾರತೀಯ ತಿಂಡಿ ರುಚಿ ಸವಿಯಲು ದೊರೆತರೆ ಅದರ ಆನಂದವೇ ವಿಭಿನ್ನವಾಗಿರುತ್ತದೆ. ಅಲ್ಲಿ ದೂರದಲ್ಲಿ ಅಮೇರಿಕಾದಲ್ಲಿರುವ ರೆಸ್ಟೋರೆಂಟ್ ವೊಂದು ದಕ್ಷಿಣ ಭಾರತದ ತಿಂಡಿ-ತಿನುಸುಗಳನ್ನು ಸರ್ವ್ ಮಾಡುತ್ತಿದೆ. ಇದು ಅದರ ವಿಶೇಷತೆಯ ಬಗೆಗಿನ ಸ್ಟೋರಿ.

ಆ ಹೋಟೆಲ್ ದೊರೆಯುವ ಆಹಾರಗಳ ಪಟ್ಟಿಯನ್ನು ನೋಡಿದ್ರೆ, ನೀವೂ ಕೂಡ ಒಂದು ಕ್ಷಣ ನಿಬ್ಬೆರಗಾಗುವಿರಿ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರೊಬ್ಬರು ಆ ಹೋಟೆಲ್ ನಲ್ಲಿ ದೊರೆಯುವ ತಿಂಡಿ-ತಿನುಸುಗಳ ಮೆನು ಹಂಚಿಕೊಂಡಿದ್ದಾರೆ. ಈ ಮೆನು ಅನ್ನು ನೋಡಿದ ಭಾರತೀಯ ನೆಟ್ಟಿಗರು ಅದನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಎಂದರೆ, ಆ ಹೋಟೆಲ್, ಶುದ್ಧ ದಕ್ಷಿಣ ಭಾರತದ ತಿಂಡಿಯಾಗಿರುವ ವಡೆಗೆ ಮತ್ತು ಇಡ್ಲಿಗೆ ಮರು ನಾಮಕರಣ ಆಗಿದೆ. ವಡೆಗೆ ‘ಡೋನೆಟ್’ ಹಾಗೂ ಇಡ್ಲಿಯನ್ನು ‘ರೈಸ್ ಕೇಕ್’ ಹೆಸರಿನಿಂದ ಅಲ್ಲಿ ಮಾರಾಟಮಾಡಲಾಗುತ್ತಿದೆ.

ಒಂದು ವಡೆಗೆ ಕೇವಲ 1300 ರೂ. ಮಾತ್ರ !
ಅಮೇರಿಕಾದಲ್ಲಿರುವ Indian Crepe Co.ಹೆಸರಿನ ಈ ರೆಸ್ಟೋರೆಂಟ್ ದಕ್ಷಿಣದ ಅತ್ಯಂತ ಜನಪ್ರೀಯ ತಿಂಡಿಯಾಗಿರುವ ವಡೆಯನ್ನು Dunked Doughnut Delight ಹೆಸರಿನಿಂದ ಮಾರಾಟ ಮಾಡುತ್ತಿದೆ. ಅಲ್ಲಿನ ಗ್ರಾಹಕರು 2 ವಡೆಗೆ ಒಟ್ಟು $16.49 (1300) ಪಾವತಿಸಬೇಕು. ಇನ್ನೊಂದೆಡೆ ಇಡ್ಲಿ-ಸಾಂಬಾರ್ ಅನ್ನು Dunked Rice Cake Delight ಅಡಿ ಮಾರಾಟ ಮಾಡುತ್ತದೆ ಮತ್ತು ಇದಕ್ಕಾಗಿ ನೀವು ಡಾಲರ್ 15.39 (ಅಂದರೆ ಸುಮಾರು ರೂ.1200) ತೆರಬೇಕು.

ಒಂದು ದೋಸೆಗಾಗಿ ಎಷ್ಟು ಬೆಲೆ ಗೊತ್ತೇ?
ಇಡ್ಲಿ-ವಡೆ ಜೊತೆಗೆ ಈ ರೆಸ್ಟೋರೆಂಟ್ ದೋಸೆ ಕೂಡ ಸರ್ವ ಮಾಡುತ್ತದೆ. ಸಾದಾ ದೋಸೆಯನ್ನು Naked Crepe ( ಕನ್ನಡದಲ್ಲಿ ನಗ್ನ ಬಟ್ಟೆ) ಹೆಸರಿನಿಂದ ಸರ್ವ ಮಾಡಲಾಗುತ್ತಿದ್ದು, ಒಂದು ಸಾದಾ ಸೀದಾ ದೊಸೆಗೆ ಜನರು ರೂ.1400 ಅಂದರೆ $ 17.59 ಪಾವತಿಸಬೇಕು.

ಜನರಿಂದ ಹರಿದುಬಂದ ಸ್ವಾರಸ್ಯಕರ ಪ್ರತಿಕ್ರಿಯೆಗಳು
ಸಾಮಾಜಿಕ ಮಾಧ್ಯಮದ ಮೇಲೆ ಈ ಪೋಸ್ಟ್ ವೈರಲ್ ಆಗುತಿದ್ದಂತೆ, ಈ ಪೋಸ್ಟ್ ಗೆ ಜನರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಪಂಚಾಯತ್’ ವೆಬ್ ಸೀರೀಸ್ ನ ಜನಪ್ರೀಯ ಡೈಲಾಗ್ ರೂಪದಲ್ಲಿ ಓರ್ವ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ‘ ನೋಡಿದೆಯಾ ವಿನೋದ್, ಹೇಗೆ ದಕ್ಷಿಣ ಭಾರತದ ತಿಂಡಿಗಳಿಗೆ ವಿವಿಧ ಹೆಸರುಗಳನ್ನು ನೀಡಿ, ಬೆಲೆ ಹೆಚ್ಚಿಸಲಾಗುತ್ತಿದೆ’ ಎಂದಿದ್ದಾರೆ. ಮತ್ತೋರ್ವ ಬಳಕೆದಾರರು, ” ಇಂಗ್ಲಿಷ್ ಹೆಸರುಗಳಿಗಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ. ತಿಂಡಿಗಳ ಮೂಲ ಹೆಸರಿನಿಂದ ಅವುಗಳನ್ನು ಮಾರಾಟ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಭಾರಿ ಟ್ರೋಲ್ ಗೆ ಗುರಿಯಾಗಿರುವುದು ವಿಶೇಷ.

Leave A Reply

Your email address will not be published.