ರೈಲ್ವೆ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ ಕೇಂದ್ರ ಹಂಚಿಕೆ

ನವದೆಹಲಿ : ದೂರದ ಪರೀಕ್ಷಾ ಕೇಂದ್ರದಿಂದಾಗಿ ತೊಂದರೆ ಅನುಭವಿಸುತ್ತಿದ್ದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಪರೀಕ್ಷಾ ಕೇಂದ್ರಗಳನ್ನ ಹಂಚಲು ಗೂಗಲ್ ಮ್ಯಾಪ್ ಬಳಸುತ್ತದೆ.

ರೈಲ್ವೆಯೂ ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್ ಮೂಲಕ ಪರೀಕ್ಷಾ ಕೇಂದ್ರಗಳನ್ನ ಹಂಚುತ್ತಿದ್ದು, ಅಭ್ಯರ್ಥಿಗಳು ಪ್ರಯಾಣದಲ್ಲಿ ಕಳೆಯುವ ಸಮಯ ತಗ್ಗಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ.

ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಟ್ವಿಟರ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದು, ಕೋಲ್ಕತ್ತಾದ ಟ್ವಿಟರ್ ಬಳಕೆದಾರರು ತನಗೆ ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರವನ್ನ ನಿಗದಿಪಡಿಸಲಾಗಿದೆ ಎಂದು ಹೇಳಿದ್ರೆ, ಬೆಂಗಳೂರಿನ ಅಭ್ಯರ್ಥಿಯು 1,900 ಕಿಮೀ ದೂರದ ರಾಂಚಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ ಎಂದು ದೂರಿದ್ದರು. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಿರಿಯ ರೈಲ್ವೇ ಅಧಿಕಾರಿಯೊಬ್ಬರು, “ನಾವು ಪ್ರತಿ ಅಭ್ಯರ್ಥಿಯು ನೀಡಿದ ಪಿನ್ ಕೋಡ್ʼನ್ನ ಗೂಗಲ್ ಮ್ಯಾಪ್ ಮೂಲಕ ಅವರ ವಾಸಸ್ಥಳದಿಂದ 300 ಕಿಮೀ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರದೊಂದಿಗೆ ಲಿಂಕ್ ಮಾಡುತ್ತಿದ್ದೇವೆ. ಬಸ್ ಮತ್ತು ರೈಲಿನಂತಹ ವಿವಿಧ ಸಾರಿಗೆ ವಿಧಾನಗಳ ಮೂಲಕ ಕೇಂದ್ರವನ್ನ ಪ್ರವೇಶಿಸಬಹುದು ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದು ವರ್ಕ್‌ ಆದ್ರೆ, ಅಭ್ಯರ್ಥಿಗಳ ಸಾಮಾನ್ಯ ಮತ್ತು ಶಾಶ್ವತ ಸಮಸ್ಯೆಯನ್ನ ಪರಿಹರಿಸಲು ಸಾಧ್ಯವಾದಂತಾಗುತ್ತೆ” ಎಂದರು.

ಪ್ರಸ್ತುತ 300 ಕಿ.ಮೀ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಶೇ.99ರಷ್ಟು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, 400 ಕಿ.ಮೀ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಶೇ.100 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಆದರೆ, ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳು ಕೆಲವೇ ಪರೀಕ್ಷಾ ಕೇಂದ್ರಗಳಿರುವುದರಿಂದ 300 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಸತಿ ಕಲ್ಪಿಸುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಜುಲೈ 30 ರಂದು ನಡೆಯಲಿರುವ ಹಂತ -6 ಮತ್ತು ಹಂತ 4 ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಈ ಹೊಸ ಪ್ರಕ್ರಿಯೆಯು ಅನ್ವಯಿಸುತ್ತದೆ. ಈ ಪರೀಕ್ಷೆಯಲ್ಲಿ 7,026 ಹುದ್ದೆಗಳಿಗೆ 90 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸುಮಾರು 60 ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

Leave A Reply

Your email address will not be published.