ರಾಜ್ಯದಲ್ಲಿ ‘ಭಿಕ್ಷಾಟನೆ ನಿಷೇಧ ಕಾಯ್ದೆ’ ಸಂಪೂರ್ಣವಾಗಿ ಜಾರಿ!

ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸುವ ಉದ್ದೇಶದಿಂದ, ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೋಮವಾರ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಭಿಕ್ಷಾಟನೆ ನಿರ್ಮೂಲನೆ ಕುರಿತಾಗಿ ಸಭೆ ನಡೆಸಿದ ಬಳಿಕ ಅವರು ಮಾಹಿತಿ ನೀಡಿದರು.

ಕೆಲವು ಕಡೆ ನಿಷೇಧಿತ ಅಮಲು ಪದಾರ್ಥಗಳನ್ನು ಮಕ್ಕಳಿಗೆ ನೀಡಿ ಅಂಗವಿಕಲರನ್ನಾಗಿ ಮಾಡಿ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಭಿಕ್ಷಾಟನೆ ಮಾಫಿಯಾ ನಿಯಂತ್ರಿಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸಿ ಸರ್ಕಾರೇತರ ಸಂಸ್ಥೆಗಳು, ವಸತಿ ಮಂದಿರಗಳು, ಬಾಲಗೃಹಗಳಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡು ಬಂದರೆ ತಕ್ಷಣ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸಚಿವರು ತಿಳಿಸಿದ್ದಾರೆ.

Leave A Reply

Your email address will not be published.