ಬೆಳ್ತಂಗಡಿ : ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ, ದಲಿತ ಮುಖಂಡ ಪಿ.ಡೀಕಯ್ಯ ಸಾವಿನ ಬಗ್ಗೆ ಅನುಮಾನ ಹಿನ್ನೆಲೆ !

ಬೆಳ್ತಂಗಡಿ : ಇತ್ತೀಚೆಗೆ ನಿಧನರಾದ ಹಿರಿಯ ಚಿಂತಕ ಅಂಬೇಡ್ಕರ್ ವಾದಿ ದಲಿತ ಮುಖಂಡ ಪಿ.ಡೀಕಯ್ಯ ಅವರ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಂದು ಮತ್ತೆ ಮೃತ ದೇಹವನ್ನು ಹೊರತೆಗೆದ ಪ್ರಕ್ರಿಯೆ ಪದ್ಮುಂಜದಲ್ಲಿ ನಡೆದಿದೆ.

ಜು. 8 ರಂದು ಮಿದುಳಿನ ರಕ್ತಸ್ರಾವದಿಂದ ಅವರು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ವರದಿಯಲ್ಲಿ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕುಟುಂಬಸ್ಥರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ದೂರು ನೀಡಿರುವ ಹಿನ್ನಲೆಯಲ್ಲಿ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಡೀಕಯ್ಯ ಅವರು ಒಬ್ಬರೇ ಮನೆಯಲ್ಲಿ ಇದ್ದು, ಅವರ ಪತ್ನಿ
ಪದ್ಮುಂಜದ ಕುಟುಂಬದ ಮನೆಯಲ್ಲಿ ಇದ್ದ ದಿನ ಡೀಕಯ್ಯ ಅವರು ಗರ್ಡಾಡಿಯ ಮನೆಯಲ್ಲಿ ಅಸ್ವಸ್ಥರಾಗಿದ್ದಾರೆ. ಬೆಳಿಗ್ಗೆ ಮನೆಯವರು ಬಂದಾಗ ಮನೆಯ ಬಾಗಿಲು ಹಾಕಿದ್ದು, ಅವರು ಬಾಗಿಲು ತೆಗೆಯದ ಹಿನ್ನಲೆಯಲ್ಲಿ ಮನೆಯ ಬಾಗಿಲನ್ನು ಒಡೆದು ಮನೆಯೊಳಗೆ ಹೋದಾಗ ಅವರು ಅಡುಗೆ ಮನೆಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ನಿಧನ ಹೊಂದಿದ್ದರು. ಇದೀಗ ಅನುಮಾನ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಒಟ್ಟು ಘಟನೆಯ ಬಗ್ಗೆ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಆರಂಭಿಸಿದ್ದಾರೆ.ನಿಯಮದಂತೆ ಮಹಜರು ನಡೆಸುತ್ತಿದ್ದು, ಬಳಿಕ ದಪನ ಮಾಡಲಾದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಬೆಳ್ತಂಗಡಿ ತಹಶೀಲ್ದಾರ್, ಹಿರಿಯ ಪೊಲೀಸ್ ಅಧಿಕಾರಿ,ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಮೃತ ದೇಹದ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave A Reply

Your email address will not be published.