ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಸಿಂಪಲ್ ಆಗಿ ಹೇಳೋದಾದರೆ, ಬಾಳು ಬೆಳಗುವಂತಹ ದಿನವೆಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಈ ಜೋಡಿಗೆ ತಮ್ಮ ಮದುವೆ ಕತ್ತಲೆ ಕೋಣೆಯ ಸಂಭ್ರಮವಾಗಿದೆ.
ಹೌದು. ಇಲ್ಲೊಂದು ಕಡೆ ಜೋಡಿಯು ಟಾರ್ಚ್ ಬೆಳಗಿಗೆ ಮದುವೆಯಾಗಿದ್ದಾರೆ. ಅಷ್ಟಕ್ಕೂ ಈ ಕತ್ತಲೆಯ ಮದುವೆಯನ್ನು ಮುಂದೆನಿಂತು ಮಾಡಿಸಿದ್ದೇ ಪೊಲೀಸರು. ಅವರ ಈ ನಿರ್ಧಾರದ ಹಿಂದಿರುವ ರೋಚಕ ಕಹಾನಿ ಇಲ್ಲಿದೆ ನೋಡಿ..
ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದವನಿಗೆ, ಪೊಲೀಸರ ಸಮ್ಮುಖದಲ್ಲಿ ನೈಟ್ ಡ್ರೆಸ್ ನಲ್ಲೇ ಪ್ರೀತಿಸಿದಾಕೆಯೊಂದಿಗೆ ಆತನ ಮದುವೆ ಮಾಡಿಸಲಾಗಿದೆ. ಬಿಹಾರದ ಜಮಾಯು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಜಮಾಯು ಜಿಲ್ಲೆಯ ನಿರಂಜನ್ ಎಂಬಾತ ಗುಜರಾತಿನ ಸೂರತ್ ನಲ್ಲಿ ಕೆಲಸ ಮಾಡುವ ವೇಳೆ ಯುವತಿಯೊಬ್ಬಳ ಪ್ರೀತಿಗೆ ಬಿದ್ದಿದ್ದ. ಇತ್ತೀಚೆಗೆ ಆತ ತನ್ನ ಗ್ರಾಮಕ್ಕೆ ಬಂದಾಗ ಪೋಷಕರು ಮತ್ತೊಬ್ಬಾಕೆಯೊಂದಿಗೆ ಈತನ ಮದುವೆ ನೆರವೇರಿಸಲು ಮುಂದಾಗಿದ್ದರು. ಇದು ಹೇಗೋ ನಿರಂಜನ ಪ್ರೀತಿಸುತ್ತಿದ್ದ ಹುಡುಗಿ ಕಿವಿಗೆ ಬಿದ್ದಿದೆ. ಕೂಡಲೇ ತನ್ನ ಪೋಷಕರೊಂದಿಗೆ ನಿರಂಜನನ ಗ್ರಾಮಕ್ಕೆ ಬಂದ ಅವಳು ಗದ್ದಲ ಎಬ್ಬಿಸಿದ್ದಾಳೆ.
ಅಲ್ಲದೆ, ಗ್ರಾಮದ ಮುಖಂಡರಿಗೂ ಸಹ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಹೇಳಿದ್ದಾಳೆ. ಕೊನೆಗೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇವರಿಬ್ಬರ ಪ್ರೀತಿಯನ್ನು ಅರಿತ ಪೊಲೀಸರು ನೈಟ್ ಡ್ರೆಸ್ ನಲ್ಲಿದ್ದ ನಿರಂಜನನ ಮದುವೆಯನ್ನು ಟಾರ್ಚ್ ಬೆಳಕಿನಲ್ಲಿ ನೆರವೇರಿಸಿದ್ದಾರೆ. ಇದಾದ ಬಳಿಕ ಆತ ಬಲವಂತವಾಗಿ ನನ್ನ ಮದುವೆ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.