ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ | ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿವಿ ಸಿಂಧು, ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಜಯ ಸಾಧಿಸಿ ಭಾರತದ ಸ್ಟಾರ್ ಶಟ್ಲರ್ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ.

ಇಂದು ನಡೆದ ಸಿಂಗಾಪುರ ಓಪನ್ ಫೈನಲ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಚೀನಾದ ವಾಂಗ್ ಝಿ ಯಿ ಅವರನ್ನು 21-9, 11-21, 21-15 ಅಂತರದಿಂದ ಸೋಲಿಸಿ ಮೂರನೇ ಪ್ರಶಸ್ತಿಯನ್ನು ಗೆದ್ದರು. ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಮಹಿಳಾ ಶಟ್ಲರ್ ಮತ್ತು ಮೂರನೇ ಭಾರತೀಯರಾದರು. ಸೈನಾ ನೆಹ್ವಾಲ್ (2010) ಮತ್ತು ಬಿ ಸಾಯಿ ಪ್ರಣೀತ್ (2017) ಈ ಹಿಂದೆ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದರು.

ಇದು ಈ ವರ್ಷ ಸಿಂಧು ಅವರ ಮೊದಲ ಸೂಪರ್ 500 ಪ್ರಶಸ್ತಿಯಾಗಿದೆ. ಅವರು ಈ ಹಿಂದೆ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು ಮತ್ತು ಎರಡು ಒಲಂಪಿಕ್ ಪದಕಗಳ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್‌ನಿಂದ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಹೊಂದಿರುವ ಅವರ ಖಾತೆಗೆ ಇದು ಕೂಡ ಸೇರ್ಪಡೆಯಾಗಿದೆ. ಇದು ಸಿಂಧು ಅವರ ವೃತ್ತಿಜೀವನದ 18ನೇ ಪ್ರಶಸ್ತಿಯಾಗಿದೆ. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಸಿಂಧು ಕಾಮನ್‌ವೆಲ್ತ್‌ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಭರವಸೆ ಮೂಡಿಸಿದ್ದಾರೆ.

Leave A Reply

Your email address will not be published.