‘ಸರ್ವಿಸ್’ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!

ತಮ್ಮ ಉತ್ಪನ್ನ ಖರೀದಿ ಮಾಡಿದ ನಂತರವೂ ಸರ್ವಿಸ್ ಹೆಸರಿನಲ್ಲಿ ಹಣವನ್ನು ಪೀಕುತ್ತಿದ್ದ ದೇಶದ ಬಹುದೊಡ್ಡ ಕಂಪೆನಿಗಳಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದೆ. ‘ಒಮ್ಮೆ ಓಪನ್ ಮಾಡಿದರೆ ಅಥವಾ ಮೂರನೇ ವ್ಯಕ್ತಿಯಿಂದ ರಿಪೇರಿ ಮಾಡಿಸಿದರೆ ವಾರಂಟಿ ಅನ್ವಯಿಸುವುದಿಲ್ಲ’ ಎಂದು ಕಂಪನಿಗಳು ನೀಡುವ ಷರತ್ತು ವಿಧಿಸುವಂತಿಲ್ಲ ಎಂಬ ನಿಯಮವನ್ನು ರೂಪಿಸಲು ಮುಂದಾಗಿದೆ ಎನ್ನಲಾಗಿದೆ.

ಗ್ರಾಹಕರ ಒಳಿತಿಗಾಗಿ ‘ರಿಪೇರಿಯ ಹಕ್ಕು’ ಎಂಬ ಹೊಸ ಅಧಿಕಾರವನ್ನು ಜನರಿಗೆ ನೀಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿದೆ.

ಗ್ರಾಹಕರು ಖರೀದಿಸಿದ ಯಾವುದೇ ವಸ್ತುಗಳು ದುರಸ್ಥಿಗೆ ಬಂದರೆ, ಅವುಗಳನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ರಿಪೇರಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರುತ್ತಿದೆ. ಒಂದು ವೇಳೆ ಈ ಹಕ್ಕು ಜಾರಿಯಾದರೆ, ಯಾವುದೇ ಕಂಪೆನಿಗಳು ಬಿಡಿ ಭಾಗಗಳ ಮೇಲೆ ಏಕಸ್ವಾಮ್ಯ ಉಳಿಸಿಕೊಂಡು ಬೇರೆ ಯಾರಿಗೂ ಅವುಗಳನ್ನು ರಿಪೇರಿ ಮಾಡಲು ಬಾರದಂತೆ ಅವುಗಳನ್ನು ವಿನ್ಯಾಸಗೊಳಿಸುವಂತಿಲ್ಲ. ನಮ್ಮಿಂದ ಕೊಂಡ ಉತ್ಪನ್ನವನ್ನು ನಮ್ಮ ಅಧಿಕೃತ ಸರ್ವಿಸ್ಟ್ ಸೆಂಟರ್‌ನಲ್ಲೇ ರಿಪೇರಿ ಮಾಡಿಸಿಕೊಳ್ಳಬೇಕು ಎಂದು ಗ್ರಾಹಕರ ಮೇಲೆ
ಒತ್ತಡ ಹೇರುವಂತಿಲ್ಲ ಎಂಬ ಕಾನೂನು ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಕೃಷಿ ಉಪಕರಣಗಳು, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳು, ಗ್ರಾಹಕ ಉತ್ಪನ್ನಗಳು, ವಾಹನಗಳು ಹಾಗೂ ವಾಹನಗಳ ಬಿಡಿ ಭಾಗಗಳು ಸೇರಿದಂತೆ ಹಲವು ಉತ್ಪನ್ನಗನ್ನು ಈ ಹಕ್ಕಿನಡಿ ತರುವ ಬಗ್ಗೆ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ಜನರು ಉತ್ಪನ್ನವನ್ನು ಖರೀದಿಸಿದ ನಂತರ ಅದರ ಸಂಪೂರ್ಣ ಹಕ್ಕು ಅವರದ್ದೇ ಆಗಿರುತ್ತದೆ. ಆದರೆ, ಉತ್ಪನ್ನವನ್ನು ತಯಾರಿಸಿದ ಕಂಪೆನಿಯು ಅದರ ಮೇಲೆ ನಿಯಂತ್ರಣ ಹೇರಲು ಪ್ರಯತ್ನ ಪಡುತ್ತಿದೆ. ಹಾಗಾಗಿ, ಜನರಿಗೆ ಕಡಿಮೆ ಖರ್ಚಿನಲ್ಲಿ ತಮ್ಮ ಉತ್ಪನ್ನಗಳನ್ನು ರಿಪೇರಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಸಲುವಾಗಿ ‘ರಿಪೇರಿಯ ಹಕ್ಕು’ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ಬಿಡಿ ಭಾಗಗಳ ಮೇಲೆ ಕಂಪನಿಗಳ ಏಕಸ್ವಾಮ್ಯವನ್ನು ತಪ್ಪಿಸುವುದು ಸೇರಿದಂತೆ, ಹೊಸ ಹೊಸ ಮಾಡೆಲ್‌ಗಳನ್ನು ಜನರು ಕೊಳ್ಳುವಂತೆ ಒತ್ತಡ ಸೃಷ್ಟಿಸುವುದನ್ನು ತಪ್ಪಿಸಲು ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು
ಹೇಳಲಾಗಿದೆ.

Leave A Reply

Your email address will not be published.