ಕಂಪ್ಯೂಟರೀಕೃತ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣ!! ಶಾಲೆಯಲ್ಲಿ ಮಕ್ಕಳಿಗೆ ಸಿಗಬೇಕಿದೆ ನೈತಿಕತೆಯ ಪಾಠ

ಶುಭ್ರ ಮುಂಜಾನೆ ಎದ್ದು ಒಂದು ಲೋಟ ಬಿಸಿ ಬಿಸಿ ಟೀ/ಕಾಫಿ ಜೊತೆಗೆ ಮನೆಯ ಹಾಲ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ವಾಹಿನಿಗಳನ್ನು ಗಮನಿಸಿದಾಗ ಹೆಡ್ ಲೈನ್ ನಲ್ಲೇ ಕಾಣಸಿಗುವ ವಿಷಯ ಕೊಲೆ, ಸುಲಿಗೆ ದರೋಡೆಯಂತಹ ಅಪರಾಧ ಪ್ರಕರಣಗಳ ಸಾಲು. ಕಡಿದು ಕೊಲೆ, ಚೂರಿ ಇರಿದು ಕೊಲೆ, ಉಸಿರುಗಟ್ಟಿಸಿ ಕೊಲೆ ಒಟ್ಟಾರೆಯಾಗಿ ಕೊಲೆ ಕೊಲೆ ಕೊಲೆ! ಎನ್ನುವ ಪದ. ಈ ಸುಮಾರು ಹತ್ತು ವರ್ಷಗಳ ಹಿಂದೆ ಕೊಲೆ ಎನ್ನುವ ಪದ ಕೇಳಿದಾಗ ಸುಸ್ತಾಗಿ ತಲೆಗೆ ಕೈ ಇಟ್ಟು ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಿತ್ತು. ಅಷ್ಟು ಭಯ, ಮುಗ್ಧತೆಗಳಿತ್ತು ಮನಸ್ಸಲ್ಲಿ. ಆದರೆ ಇಂದು ಅಂತಹ ಭಾವನೆಗಳು ಕೊಲೆಯೋ ಎಂದು ತಾತ್ಸಾರವಾಗಿ ಕೇಳುವಂತ ದಿನಗಳಲ್ಲಿ ನಾವಿದ್ದೇವೆ. ಅಂದರೆ ಕೊಲೆ ಎನ್ನುವ ಪದ ಇಂದು ಮಾಮೂಲಿಯಾಗಿದೆ.

ದ್ವೇಷಕ್ಕೆ ದ್ವೇಷವೇ ಉತ್ತರವಾದರೆ ಕ್ಷಮೆ ಎನ್ನುವ ಪದಕ್ಕೆ ಅರ್ಥವಿದೆಯೇ!? ಮಾರ್ಗ ಮಧ್ಯೆಯೇ ಬರ್ಬರವಾಗಿ ಹತ್ಯೆ! ಅದು ಸುಶಿಕ್ಷಿತರೆಂಬ ಹಣೆಪಟ್ಟಿಯನ್ನು ಹೊತ್ತ ವಿದ್ಯಾವಂತರ ನಡವಳಿಕೆಗಳು. ಇಂದಿಗೂ ಹಳ್ಳಿಗಳಲ್ಲಿರುವ ಹಿರಿಯರ ಬಳಿ ತೆರಳಿ ಅವರ ಮಧ್ಯದಿ ಬೆರೆತಾಗ ಅರಿವಾಗುವುದು ದಯೆ,ಕ್ಷಮೆ ದಾಕ್ಷಿಣ್ಯಯಗಳ ಅರ್ಥ.ಅವರು ನಮ್ಮಂತೆ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕಲಿತವರಲ್ಲ,ಆದರೂ ಅವರಲ್ಲಿ ಮಾನವೀಯತೆ ಎಂಬ ಬೆಲೆ ಕಟ್ಟಲಾಗದ ಅಂಕಪಟ್ಟಿ ಮಸ್ತಕದಲ್ಲಿದೆ.ಅದೇ ನಾವು ಶಿಕ್ಷತರಾದಂತೆಲ್ಲಾ ನಮ್ಮ ನಡವಳಿಕೆಗಳಲ್ಲಿ ಬದಲಾವಣೆಯಾಗಿ ಇಂದು ಕೊಲೆಯಂತಹ ಕೃತ್ಯಗಳಿಗೂ ಹಿಂಜರಿಯದಂತಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ದ್ವೇಷ ಕಟ್ಟಿಕೊಂಡು ದ್ವೇಷ ಸಾಧಿಸುವ ಮುನ್ನ ಕೊಲೆಯಾದ-ಕೊಲೆಗೈದ ವ್ಯಕ್ತಿಯ ಮನೆಯ ಪರಿಸ್ಥಿತಿಯನ್ನು ಒಂದು ಬಾರಿ ಯೋಚಿಸಿ.ಅವರನ್ನೇ ನಂಬಿ ಅದೆಷ್ಟೋ ಜೀವಗಳಿರಬಹುದು, ಅವುಗಳಿಗೆ ಅದೆಷ್ಟು ಅವಮಾನವಾಗಿರಬಹುದು. ಒಂದೆಡೆ ನಂಬಿ ಬಂದ ಪತ್ನಿ ಮಕ್ಕಳು, ವೃದ್ಧಾಪ್ಯದಲ್ಲಿ ನಮ್ಮ ಕೈಹಿಡಿದು ನಡೆಸಿ ಆಸರೆಯಾಗಬಹುದು ಎಂದು ಹಂಬಲಿಸಿದ ಹೆತ್ತವರು.

ಯಾರೂ ಹುಟ್ಟುತ್ತಲೇ ಕ್ರಿಮಿನಲ್ ಗಳಲ್ಲ, ಹುಟ್ಟುತ್ತಲೇ ಕೆಟ್ಟವರೂ ಅಲ್ಲ. ಕೆಲವೊಂದು ಸಂದರ್ಭ, ಸನ್ನಿವೇಶಗಳು ಆ ಕಡೆ ಮುಖ ಮಾಡುವಂತೆ ಮಾಡಿರಬಹುದು.ಎಂತಹ ಕೆಟ್ಟ ಮನಸ್ಥಿತಿಗಳನ್ನು ಬದಲಾಯಿಸಿಕೊಂಡು, ಒಳ್ಳೆಯವರಾಗಿ ಬದುಕಲು ಇಲ್ಲಿ ಎಲ್ಲರಿಗೂ ಹಲವು ಅವಕಾಶಗಳಿವೆ.

ನಮ್ಮ ಪ್ರಾಥಮಿಕ ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ಅನ್ನೋ ವಿಷಯಕ್ಕೆ ಪ್ರತ್ಯೇಕ ತರಗತಿಗಲಿರಲಿಲ್ಲ. ಬದಲಿಗೆ ಇತರ ವಿಷಯಗಳನ್ನು ಬೋಧಿಸುವಾಗಲೇ ಅಧ್ಯಾಪಕರು ನೈತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದ್ದರು. ಮನೆಯಲ್ಲಿಯೂ ಒತ್ತಡದ ವಾತಾವರಣವಿರಲಿಲ್ಲ, ತಪ್ಪಾದಾಗ ತಿದ್ದಿ ಬುದ್ಧಿ ಹೇಳಲು ಹಿರಿಯರಿರುತ್ತಿದ್ದರು. ಆದರೆ ಇಂದು ಶಾಲೆಗಳಲ್ಲಿ ನೈತಿಕ ಶಿಕ್ಷಣ ಎಂಬ ಪ್ರತ್ಯೇಕ ವಿಷಯವಿದ್ದು, ಪ್ರತ್ಯೇಕ ತರಗತಿಯ ಜೊತೆಗೆ ಬೋಧಿಸಲು ಪ್ರತ್ಯೇಕ ಶಿಕ್ಷಕ-ಶಿಕ್ಷಕಿಯರಿದ್ದಾರೆ.ಇಷ್ಟಿದ್ದರೂ ವಿದ್ಯಾರ್ಥಿಗಳಲ್ಲಿ ನೈತಿಕತೆಯ ಗಂಧಗಾಳಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕಹೊರಟಾಗ ಶಿಕ್ಷಣಗಳಲ್ಲಿ ಪರಿಪೂರ್ಣತೆ ಇಲ್ಲವೇ, ಅಥವಾ ಬೋಧಿಸುವ ಶಿಕ್ಷಕರಲ್ಲಿ ಪರಿಪೂರ್ಣತೆಯ ಕೊರತೆ ಇವೆಯೇ ಎನ್ನುವ ಪ್ರಶ್ನೆಗಳು ಕಾಡುವುದು ಸಹಜ.

ಇನ್ನೊಂದು ರೀತಿಯಲ್ಲಿ ಯುವಜನತೆ ಎದುರಿಸುತ್ತಿರುವ ಸಮಸ್ಯೆ ಅಥವಾ ಮುಖ್ಯ ಕೊರತೆ ಏನೆಂದರೆ ಒತ್ತಡದವನ್ನು ನಿಭಾಯಿಸುವಲ್ಲಿ ಸೋಲುತ್ತಿರುವುದು. ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯಂತಹ ಯೋಚನೆಗಳನ್ನು ಮಾಡಿ ದುರಂತ ಅಂತ್ಯ ಕಾಣುತ್ತಿರುವುದು ಬೇಸರದ ಸಂಗತಿ.ಇಲ್ಲಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಹತೋಟಿಯಲ್ಲಿರಬೇಕು, ಏನೇ ಬಂದರೂ ಸಾಧಿಸುತ್ತೇವೆ ಎನ್ನುವ ಆತ್ಮಸ್ಥೈರ್ಯವಿರಬೇಕು. ಸೋತರೂ ಗೆದ್ದರೂ ಬದುಕು ನಮ್ಮದು, ಆ ಬದುಕನ್ನು ನಾವು ಬದುಕಬೇಕೇ ಹೊರತು ಹೊಗಳಿಕೆ ತೆಗಳಿಕೆಗಳಿಂದಲ್ಲ.

ಯಾವಾಗ ಮಕ್ಕಳ ಅಂಕಗಳಿಂದಲೇ ಅವರನ್ನು ಅಳೆಯುವ ಪರಿಪಾಠಗಳು ಬೆಳೆಯಿತೇ, ಅಂದಿನಿಂದ ಮಕ್ಕಳಲ್ಲಿ ಒತ್ತಡದ ಮನಸ್ಥಿತಿ ನಿರ್ಮಾಣವಾಯಿತು.ಸೋಲು-ಗೆಲುವುಗಳಿಗೆ ಅಂಕಗಳೇ ಮಾನದಂಡವಲ್ಲ,ಶುಭ್ರವಾದ ಮನಸ್ಸುಗಳಿರಬೇಕು.ಜೀವನದ ಏಳು-ಬೀಳುಗಳನ್ನು ಸ್ವಸ್ಥ ಮನಸ್ಸು ಮತ್ತು ಆತನ ಪರಿಶ್ರಮ ನಿರ್ಧರಿಸುತ್ತದೆ.ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಬೆಳೆಯುವುದೇ ನಿಜವಾದ ಗೆಲುವು!.

ಇಂದು ನೈತಿಕತೆ ಎಲ್ಲಿಯವರೆಗೆ ಮರೆಯಾಗಿದೆ ಎಂದರೆ ಒಬ್ಬರಿಗೊಬ್ಬರು ಕಷ್ಟ ಕಾಲಕ್ಕೆ ಸಹಾಯ ಮಾಡುವ ಕಿಂಚಿತ್ತೂ ಕರುಣೆ ಇಲ್ಲದವರಂತೆ ವರ್ಥಿಸುವ ವರೆಗೆ.ಹಿಂದೊಮ್ಮೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಬಿಕ್ಕಳಿಕೆ ಬಂತು, ಆ ಕ್ಷಣಕ್ಕೆ ನನ್ನ ಬಳಿ ನೀರಿನ ಬಾಟಲ್ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬರು ನೀರಿನ ಬಾಟಲ್ ಹಿಡಿದುಕೊಂಡಿದ್ದರೂ ಕೂಡಾ ಬಿಕ್ಕಳಿಸುತ್ತಿರುವ ನನಗೆ ನೀರು ಕೊಡುವಷ್ಟು ಉದಾರತೆ ಅವರಲ್ಲಿರಲಿಲ್ಲ. ಅವರ ಭಾವನೆ,ಮುಖಚರ್ಯೆ ಹೇಗಿತ್ತೆಂದರೆ,ಪ್ರಯಾಣದ ವೇಳೆ ನೀರು ತರಬೇಕು ಎನ್ನುವ ಅಲ್ಪ ಜ್ಞಾನವೂ ಇಲ್ಲವೇ ಎನ್ನುವಂತಿತ್ತು.

ಹೌದು, ತಪ್ಪು ನನ್ನದೇ ನಾನು ನೀರು ತಂದಿರಲಿಲ್ಲ. ಅದಕ್ಕಾಗಿಯೇನೋ ನೀರು ತಂದಿದ್ದರೂ ಸ್ವಲ್ಪ ನೀರು ಕೊಡುವ ಉದಾರತೆ ಅವರಲ್ಲಿರಲಿಲ್ಲ.ಇದೇ ಇಂದಿನ ನೈತಿಕತೆ,ಅಶಕ್ತರು ಬಂದಾಗ ಬಸ್ಸಿನಲ್ಲಿ ಅವರನ್ನು ಬಿಟ್ಟುಕೊಳ್ಳುವಷ್ಟು ಔದಾರ್ಯತೆ ನಮ್ಮಲ್ಲಿಲ್ಲ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಕಣ್ಮರೆಯಾಗಲು ಹೆತ್ತವರೇ ಕಾರಣವೋ ಅಥವಾ ಶಿಕ್ಷಕರೇ ಎನ್ನುವುದು ಅರ್ಥವಾಗದೆ ಇರುವ ಪ್ರಶ್ನೆಯಾಗಿದೆ. ಗುರು ಎನ್ನುವ ಶ್ರೇಷ್ಠ ವ್ಯಕ್ತಿಯನ್ನು ಆರಿಸುವ ಶಿಕ್ಷಣ ಸಂಸ್ಥೆಗಳು ಅವರು ಪಡೆದ ಅಂಕ, ಅವರ ಸರ್ಟಿಫಿಕೇಟ್ ಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲು ಯೋಗ್ಯ ವ್ಯಕ್ತಿಗಳನ್ನು ಆರಿಸುವಲ್ಲಿ ಸಫಲವಾದಾಗ ಮಾತ್ರ ಸಾಧ್ಯ.

ಇಂದು ಹೇಗಾಗಿದೆ ಎಂದರೆ ಬಿ.ಎಡ್ ಮುಗಿಸಿಕೊಂಡವರೆಲ್ಲರೂ ಶಿಕ್ಷಕರೇ. ಗುರುವಿನಲ್ಲಿ ಕೊರತೆಗಳಿದ್ದಾಗ ವಿದ್ಯಾರ್ಥಿಯನ್ನು ಕೊರತೆ ಇಲ್ಲದಂತೆ ಬೆಳೆಸಲು ಸಾಧ್ಯವೇ!?ನಮ್ಮ ಶಿಕ್ಷಣ ಕಂಪ್ಯೂಟರೀಕೃತ ವ್ಯವಸ್ಥೆಯ ಜೊತೆಗೆ ಮೌಲ್ಯಗಳನ್ನು ಕಲಿಸುವಂತಾಗಲಿ.ಯೋಚಿಸುವ ಸರದಿ ಓದುಗ ಮಿತ್ರರದ್ದಾಗಿದೆ.
ಧನ್ಯವಾದಗಳು

🖊️ ಮೋಹಿತಾ ಹೊಸ್ಮಠ

error: Content is protected !!
Scroll to Top
%d bloggers like this: