ಬಂಟ್ವಾಳ : ಜೇನುತುಪ್ಪ ಎಂದು ಬೆಲ್ಲಪಾಕ ಕೊಟ್ಟ ಖದೀಮರು| ಸ್ಥಳೀಯರು ಕಂಡು ಹಿಡಿದ ಬಗೆ ಹೇಗೇ ಗೊತ್ತೇ ?

ಬಂಟ್ವಾಳ : ಬಿ.ಸಿ.ರೋಡ್‌ ಸಮೀಪದಲ್ಲಿರುವ ಕೈಕಂಬ ಎಂಬಲ್ಲಿ ಗುರುವಾರ ಬೆಳಗ್ಗೆ ಕಟ್ಟಡದ ಮೇಲೆ ಕಟ್ಟಿದ್ದ ಜೇನುಗೂಡಿಂದ ಜೇನು ತೆಗೆದು ಕೊಡುತ್ತೇವೆ ಎಂದು ಜನರನ್ನು ನಂಬಿಸಿ ಜೇನು ತೆಗೆದು ಕೊಟ್ಟಂತೆ ನಟಿಸಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. ಅನಂತರ ಅದನ್ನು ಪರೀಕ್ಷೆ ಮಾಡಿದಾಗ ತಿಳಿದು ಬಂದದ್ದು ಅದು ಬೆಲ್ಲದ ಪಾಕವೆಂದು.

ಸ್ಥಳೀಯರು ಇದರಿಂದ ಸಿಟ್ಟಿಗೆದ್ದು ಜೇನು ತುಪ್ಪ ಅಂತ ಮಾರಾಟ ಮಾಡುತ್ತಿದ್ದ ನಕಲಿ ಜೇನು ಮಾರಾಟಗಾರರ ತಂಡಕ್ಕೆ ಸರಿಯಾಗಿ ಧರ್ಮದೇಟು ನೀಡಿ ಓಡಿಸಿದ್ದಾರೆ.

ಕೈಕಂಬ ಜಂಕ್ಷನ್‌ನಲ್ಲಿರುವ ಕಟ್ಟಡದ ಮೇಲಂತಸ್ತಿನಲ್ಲಿ ಜೇನು ಗೂಡು ಕಟ್ಟಿತ್ತು. ಈ ಜೇನು ಗೂಡನ್ನು ತೆರವುಗೊಳಿಸಿಕೊಡುವುದಾಗಿ ಅನ್ಯರಾಜ್ಯದ ಕಾರ್ಮಿಕರ ತಂಡ ಆಗಮಿಸಿತ್ತು. ಇತ್ತೀಚೆಗಷ್ಟೆ ಗೂಡು ಕಟ್ಟಿದ್ದರಿಂದ ಅದರಲ್ಲಿ ಜೇನು ಸಂಗ್ರಹಗೊಂಡಿರಲಿಲ್ಲ. ಈ ನಡುವೆ ತಂಡ ಬೆಲ್ಲಪಾಕ ಹಾಗೂ ಜೇನು ಮೇಣವನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡು ಈಗಷ್ಟೇ ತೆಗೆದ ಜೇನು ತುಪ್ಪ ಎಂದು ಜನರನ್ನು ನಂಬಿಸಿ ಮಾರಾಟ ಮಾಡಿ ಹಣ ಸಂಪಾದಿಸಿದ್ದರು.

ಕೆಲಹೊತ್ತಿನಲ್ಲಿಯೇ ಇದು ಬೆಲ್ಲದ ಪಾಕ ಎಂದು ಅರಿವಾಗಿ ಆಕ್ರೋಶಿತ ಸಾರ್ವಜನಿಕರು ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಇನ್ನು ಎಲ್ಲೂ ನಕಲಿ ಜೇನುತುಪ್ಪ ಮಾರಾಟಮಾಡದಂತೆ ಎಚ್ಚರಿಕೆ ನೀಡಿ ಓಡಿಸಿದ್ದಾರೆಂದು ತಿಳಿದುಬಂದಿದೆ.

Leave A Reply

Your email address will not be published.