ಬೆಳ್ತಂಗಡಿ । ಮತ್ತೆ ಸುರಿದ ರಕ್ತ ವರ್ಣದ ಮಳೆ !

ಸುರಿಯುತ್ತಿರುವ ಮಳೆ ಇಡೀ ರಾಜ್ಯದ ಜನತೆಯನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿದೆ. ಮಳೆರಾಯನ ಆರ್ಭಟಕ್ಕೆ ನೆರೆ ಬಂದು, ಕೊಳ್ಳಗಳು ತುಂಬಿ ಅದೆಷ್ಟೋ ಮಂದಿಯ ಬದುಕು ತತ್ತರ ಆಗಿದೆ. ಆದರೆ, ಇದೆಲ್ಲದರ ನಡುವೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದೆ. ಅಲ್ಲಿ ಬಣ್ಣದ ಮಳೆ ಸುರಿದಿದೆ. ಇದು ಈ ವರ್ಷ ಬೆಳ್ತಂಗಡಿಯಲ್ಲಿ ಕಂಡ ಎರಡನೇ ಪ್ರಕರಣ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ರಕ್ತ ವರ್ಷ ಸುರಿದಿತ್ತು.

ಇಲ್ಲೇ, ಕಲ್ಮಂಜ ಗ್ರಾಮದಲ್ಲಿ ಓರ್ವರ ಮನೆಯ ಪರಿಸರದಲ್ಲಿ ಇಂದು ಬೆಳಿಗ್ಗೆ ಕೆಂಪು ಮಳೆ ಸುರಿದಿರುವ ಘಟನೆ ನಡೆದಿದೆ. ಕಲ್ಮಂಜ ಗ್ರಾಮದ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಶಾನು ಬೋಗ್ ನಿವಾಸಿ ದಿವಾಕರ ಗೌಡ ಎಂಬವವರ ಮನೆಯ ಪರಿಸರದಲ್ಲಿ ಈ ವೈಚಿತ್ರ ನಡೆದಿದೆ.

ಸಾಮಾನ್ಯವಾಗಿ ಮಳೆಗೆ ಬಣ್ಣ ಇರಲ್ಲ. ಮಳೆ ಸ್ಪಟಿಕ ಶುದ್ಧ (ಕ್ರಿಸ್ಟಲ್ ಕ್ಲೀಯರ್ ) ಇರಬೇಕು. ಕೆಲವೊಮ್ಮೆ ವಾತಾವರಣದ ಧೂಳು ಕರಗಿಸಿಕೊಂಡು ಬಂದಾಗ, ಸಾಮಾನ್ಯವಾಗಿ ಮೊದಲ ಮಳೆ ಸ್ವಲ್ಪ ಮಣ್ಣಿನ ಬಣ್ಣಕ್ಕೆ ಬರುವುದು ಸಹಜ. ಆದರೆ, ಇಲ್ಲಿ ವಿಚಿತ್ರವೆಂಬತೆ ಕೆಂಪು ಮಳೆ ಸುರಿದು, ಈ ಪ್ರದೇಶದ ಜನರನ್ನು ವಿಸ್ಮಯಗೊಳಿಸಿದೆ. ಕೆಂಪು ನೀರು ನೋಡಿ ಮಕ್ಕಳಿಗೆ ಖುಷಿ. ಆದರೆ ಹಿರಿಯರಿಗೆ ಈ ಪ್ರಾಕೃತಿಕ ವಿಸ್ಮಯ ನೋಡಿ ಗಾಬರಿ.

ಕಳೆದ 7 ವಾರದ ಹಿಂದೆ ಇಂತಹದ್ದೇ ಪ್ರಕರಣ ಬೆಳ್ತಂಗಡಿ ತಾಲೂಕಿನಲ್ಲೇ ನಡೆದಿದ್ದು, ಇಲ್ಲಿ ರೆಡ್ ಮಳೆ ಸುರಿದಿತ್ತು. ರಕ್ತದ ಮಳೆ ಬಂದಿದೆ ಎಂದು ಆ ಸಂಗತಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಮತ್ತೆ ರೆಡ್ ರೈನ್ ಆಗುವ ಮೂಲಕ ಮತ್ತೆ ಜನರನ್ನು ಸೆಳೆದಿದೆ.

ಕೆಂಪು ಮಳೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹಲವು ಬಣ್ಣಗಳಲ್ಲಿ ಮಳೆ ಕಂಡುಬರುವುದು ಅಪರೂಪ. ಕೆಂಪು ಬಣ್ಣದ ಮಳೆ, ಏಷ್ಯಾ ಖಂಡದಲ್ಲಿ, ಮುಖ್ಯವಾಗಿ ಭಾರತದಲ್ಲಿ ಈ ಹಿಂದೆಯೂ ರಿಪೋರ್ಟ್ ಆಗಿತ್ತು. ಆಕಾಶಕಾಯಗಳ ಸಿಡಿತದ ತುಂಡುಗಳು ಮಳೆನೀರಿನಿಂದ ತೋಯಲ್ಪಟ್ಟು, ಆ ಬಣ್ಣ ಮಳೆಗೆ ಬರುತ್ತವೆ ಎನ್ನುವ ವಿಚಾರ ಪ್ರಚಲಿತದಲ್ಲಿದೆ. ಅಲ್ಲದೆ ಕೆಲವು ಫಂಗಸ್ ಗಳು ಕೂಡಾ ಮಳೆಗೆ ಕೆಂಬಣ್ಣವನ್ನು ನೀಡುತ್ತವೆಯಂತೆ.

ಕೇರಳದಲ್ಲಿ ಕೆಲವರ್ಷಗಳ ಹಿಂದೆ ರೆಡ್ ರೈನ್ ಸುರಿದಿತ್ತು. 2001 ರಲ್ಲಿ ಕೇರಳದಲ್ಲಿ ನಡೆದ ಬ್ಲಡ್ ರೈನ್ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಆಕಾಶಕಾಯಗಳ ಚೂರಿನಿಂದ ನೀರಿಗೆ ಬಣ್ಣ ಬಂದಿದೆ ಎನ್ನಲಾಗುತ್ತಿತ್ತು. ಕೊನೆಗೆ ಇನ್ನಷ್ಟು ಅಧ್ಯಯನ ನಡೆದು, ಅದು ಆಲ್ಗೆ ( ಪಾಚಿ ಜಾತಿಯ ) ಉಂಟಾದ ಬಣ್ಣ ಎಂದು ನಿರ್ಧರಿಸಲಾಯಿತು.

ಮಳೆ ನೀರು ಕೆಂಪು ಬಣ್ಣವಾಗಿ ಇರಲು ನಿಖರ ಕಾರಣ ಏನೆಂಬುದು ಲ್ಯಾಬ್ ವರದಿ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.