ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು (ಜು. 13) ಕಾಣಸಿಗಲಿದೆ. ವಿಶ್ವದಾದ್ಯಂತ ಅನೇಕ ಕಡೆಗಳಲ್ಲಿ ಜನರು ಹುಣ್ಣಿಮೆ ಚಂದ್ರನನ್ನು ದೊಡ್ಡ ಆಕಾರದಲ್ಲಿ ಕಾಣಬಹುದು. ಕಳೆದ ತಿಂಗಳಷ್ಟೇ ಸ್ಟ್ರಾಬೆರಿ ಸೂಪರ್‌ಮೂನ್ ನೋಡಿ ಚಕಿತರಾಗಿದ್ದೆವು. ಈ ತಿಂಗಳು ಗುರು ಪೂರ್ಣಿಮೆಯಂದು ಈ ವರ್ಷದ ಅತೀ ದೊಡ್ಡ ಚಂದ್ರನ ದರ್ಶನ ಮಾಡಬಹುದಾಗಿದೆ. ಈ ಚಂದ್ರ ದೊಡ್ಡದಾಗಿ ಕಿತ್ತಳೆ ಬಣ್ಣದಲ್ಲಿ ಗೋಚರಿಸುತ್ತಾನೆ.
‘ಸೂಪರ್‌ಮೂನ್’ ಎಂಬ ಪದವನ್ನು ರಿಚರ್ಡ್ ನೊಲ್ಲೆ ಎಂಬ ವಿಜ್ಞಾನಿ 1979 ರಲ್ಲಿ ಸೃಷ್ಟಿಸಿದರು. ಈ ವ್ಯಾಖ್ಯಾನವನ್ನು ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಅಳವಡಿಸಿಕೊಂಡಿದೆ.
ಹುಣ್ಣಿಮೆ ಅಥವಾ ಪೌರ್ಣಿಮೆ ದಿನದಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಅಂದರೆ ಅಂದು ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇರುತ್ತದೆ. ಸೂರ್ಯನ ಪ್ರಕಾಶದಲ್ಲಿ ಇಡೀ ಚಂದ್ರ ಹೊಳೆಯುತ್ತಿರುವುದನ್ನು ಭೂಮಿಯಿಂದ ಕಾಣಬಹುದು.
ಪ್ರತೀ ತಿಂಗಳು ಹುಣ್ಣಿಮೆ ಬರುತ್ತದೆ. ಒಂದು ವರ್ಷದಲ್ಲಿ ಆ ದಿನದಂದು ಭೂಮಿಗೆ ಚಂದ್ರ ಅತಿ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ ಮೂನ್ ಎನ್ನುತ್ತಾರೆ.
ಚಂದ್ರ ಮತ್ತು ಭೂಮಿಯ ನಡುವಿನ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ. ಆದರೆ ಈ ಹುಣ್ಣಿಮೆಗೆ ಚಂದ್ರನು ಭೂಮಿಯಿಂದ ಕೇವಲ 3,57,264 ಕಿಲೋಮೀಟರ್ ದೂರದಲ್ಲಿರಲಿದ್ದಾನೆ. ಇಷ್ಟು ಹತ್ತಿರ ಚಂದ್ರ ಬಂದಾಗ ಆತ ಸಾಮಾನ್ಯ ಹುಣ್ಣಿಮೆಯ ಸಮಯಕ್ಕಿಂತಾ ಶೇ.15ರಷ್ಟು ದೊಡ್ಡದಾಗಿಯೂ, ಪ್ರಕಾಶಮಾನನಾಗಿಯೂ ಕಾಣಿಸುತ್ತಾನೆ. ಇದನ್ನೇ ಸೂಪರ್‌ಮೂನ್ ಎನ್ನುವುದು.
ಈ ಬಾರಿಯ ಸೂಪರ್‌ಮೂನನ್ನು ಬಕ್ ಮೂನ್ ಎಂದು ಕರೆಯಲಾಗುತ್ತದೆ. ಇಂಗ್ಲಿಷ್‌ನಲ್ಲಿ ಬಕ್ ಎಂದರೆ ಗಂಡು ಜಿಂಕೆ. ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ, ಜಿಂಕೆ ಕೊಂಬುಗಳು ಈ ಅವಧಿಯಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ ಎಂಬ ಕಾರಣಕ್ಕೆ ದೊಡ್ಡದಾಗಿ ಬೆಳೆದ ಚಂದ್ರನಿಗೆ ಸ್ಥಳೀಯ ಅಮೆರಿಕನ್ನರು ಇದೇ ನಾಮಕರಣ ಮಾಡಿದ್ದಾರೆ. ಬೇಸಿಗೆಯ ಆರಂಭದಲ್ಲಿ ಆಗಾಗ್ಗೆ ಗುಡುಗು ಸಹಿತ ಮಳೆ ಬೀಳುವ ಕಾರಣ ಅವರು ಇದನ್ನು ಥಂಡರ್ ಮೂನ್ ಎಂದೂ ಕರೆಯುತ್ತಾರೆ. ಇದಲ್ಲದೆ, ಮೀಡ್ ಮೂನ್, ಹೇ ಮೂನ್ ಎಂದೂ ಕರೆಯಲಾಗುತ್ತದೆ.
ಸಾಮಾನ್ಯವಾಗಿ ಹುಣ್ಣಿಮೆಯಂದು ಸಮುದ್ರದ ಏರಿಳಿತಗಳು ಹೆಚ್ಚು. ಇನ್ನು ಸೂಪರ್‌ಮೂನ್‌ನಿಂದಾಗಿ ಹೆಚ್ಚಿನ ಮತ್ತು ಕಡಿಮೆ ಸಮುದ್ರದ ಉಬ್ಬರವಿಳಿತಗಳನ್ನು ಕಾಣಬಹುದು. ಈ ಸಮಯದಲ್ಲಿ ಸಮುದ್ರದಲ್ಲಿ ಬಿರುಗಾಳಿಗಳು ಉಲ್ಬಣಗೊಳ್ಳುವ ಕರಾವಳಿ ಪ್ರವಾಹಕ್ಕೆ ಕಾರಣವಾಗಬಹುದು.
ಈ ವಾರ ಬರಲಿರುವ ಸೂಪರ್ ಮೂನ್ ಈ ವರ್ಷದ ಅತಿ ದೊಡ್ಡದು ಎನಿಸಿದ್ದು, ಸಮುದ್ರದ ಅಲೆಗಳು ಇನ್ನೂ ಹೆಚ್ಚು ತೀವ್ರತೆಯಲ್ಲಿ ಪುಟಿದೇಳುತ್ತದೆ. ಹೀಗಾಗಿ, ನೀವು ಈ ಹುಣ್ಣಿಮೆಯಂದು ಸಮುದ್ರದ ಬಳಿ ಹೋಗೋದನ್ನು ತಪ್ಪಿಸಿದರೆ ಉತ್ತಮ.
ಮಂಗಳವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆವರೆಗೆ ಮೂರು ದಿನಗಳ ಕಾಲ ಹುಣ್ಣಿಮೆ ಚಂದ್ರನ ಮನೋಹರ ದೃಶ್ಯವನ್ನು ಕಾಣಬಹುದು. ಭಾರತೀಯ ಕಾಲಮಾನದಲ್ಲಿ ಬುಧವಾರ ಮಧ್ಯ ರಾತ್ರಿ ಪರಿಪೂರ್ಣ ಸೂಪರ್ ಮೂನ್ ದರ್ಶನ ಆಗುತ್ತದೆ.