ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ | 24 ದಿನಗಳಲ್ಲಿ ಇದು ಒಂಬತ್ತನೇ ಅಚಾತುರ್ಯ

ನವದೆಹಲಿ: ದೇಶದ ದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷ ಉಂಟಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಇಂದು ಕೂಡ ದುಬೈನಿಂದ ಮಧುರೈಗೆ ತೆರಳಬೇಕಿದ್ದ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ನೋಸ್ ವೀಲ್ಹ್ ದೋಷದಿಂದ ವಿಮಾನ ತಡವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಮಧುರೈ ಮಾರ್ಗವಾಗಿ ಹಾರಾಟ ನಡೆಸಬೇಕಿದ್ದ ವಿಮಾನವನ್ನು ಇಂಜಿನಿಯರ್​ ಪರಿಶೀಲನೆ ನಡೆಸಿದ ವೇಳೆ, ಮುಂದಿನ ಭಾಗದ ಚಕ್ರ ಸಹಜತೆಗಿಂತಲೂ ಸ್ಪಲ್ಪ ಕುಗ್ಗಿದಂತೆ ಕಂಡು ಬಂದಿದೆ. ಇದರಿಂದ ವಿಮಾನದ ಹಾರಾಟಕ್ಕೆ ತಡೆ ನೀಡಿ, ಬಳಿಕ ಮುಂಬೈನಿಂದ- ಮಧುರೈಗೆ ವಿಮಾನದ ವ್ಯವಸ್ಥೆ ಮಾಡಲಾಗಿದೆ. ದುಬೈನಿಂದ ಮಧುರೈಗೆ ಹಾರಬೇಕಿದ್ದ ವಿಮಾನದಲ್ಲಿ ಕೊನೆ ಕ್ಷಣದ ತಾಂತ್ರಿಕ ದೋಷ ಉಂಟಾದ ಕಾರಣ, ವಿಮಾನ ಪ್ರಯಾಣ ವಿಳಂಬವಾಗಿದೆ. ತಕ್ಷಣವೇ ಮುಂಬೈನಿಂದ ವಿಮಾನ ಕಾರ್ಯಾಚರಣೆ ನಡೆಸಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ವಿಮಾನದ ಸುರಕ್ಷತೆ ಬಗ್ಗೆ ಭಯ ಬೇಡ ಎಂದು ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

ಸೋಮವಾರದ ಘಟನೆಯು ಕಳೆದ 24 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷದ ಒಂಬತ್ತನೇ ಘಟನೆಯಾಗಿದೆ. ಕಳೆದ ಕೆಲ ದಿನಗಳಿಂದ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷಗಳು ಸಂಭವಿಸುತ್ತಿದ್ದು, ಜೂನ್ 19ರಿಂದ ಸ್ಪೈಸ್ ಜೆಟ್ ನ ವಿಮಾನದಲ್ಲಿ ಎಂಟು ತಾಂತ್ರಿಕ ಅಸಮರ್ಪಕ ಘಟನೆಗಳ ವರದಿಯಾಗಿದೆ. ಹೀಗಾಗಿ, ಜುಲೈ 6ರಂದು DGCA ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿದೆ.

ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸಲು ವಿಮಾನ ಸಂಸ್ಥೆ ವಿಫಲವಾಗಿದೆ ಎಂದು ವಿಮಾನಯಾನ ನಿಯಂತ್ರಕ ಹೇಳಿದೆ. ಸೋಮವಾರ, ವಿಟಿ-ಎಸ್‌ಜೆಡ್‌ಕೆ ನೋಂದಣಿ ಸಂಖ್ಯೆಯ ಬೋಯಿಂಗ್ ಬಿ 737 ಮ್ಯಾಕ್ಸ್ ವಿಮಾನವು ಮಂಗಳೂರು-ದುಬೈ ವಿಮಾನವನ್ನು ನಿರ್ವಹಿಸಿತು ಎಂದು ಡಿಜಿಸಿಎ ಅಧಿಕಾರಿಗಳು ಹೇಳಿದರು.

ವಿಷಯದ ಕುರಿತು ಸ್ಪೈಸ್‌ಜೆಟ್ ವಕ್ತಾರರು ಮಾತನಾಡಿ , ‘2022 ಜುಲೈ 11ರಂದು ಸ್ಪೈಸ್‌ಜೆಟ್ ಫ್ಲೈಟ್ SG23 ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈನಿಂದ ಮಧುರೈಗೆ ಕಾರ್ಯ ನಿರ್ವಹಿಸುವುದು ವಿಳಂಬವಾಯಿತು. ತಕ್ಷಣವೇ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು ಮತ್ತು ಪ್ರಯಾಣಿಕರನ್ನು ಭಾರತಕ್ಕೆ ಕರೆತರಲಾಯಿತು. ಯಾವುದೇ ವಿಮಾನಯಾನ ಸಂಸ್ಥೆಯಲ್ಲೂ ವಿಮಾನ ವಿಳಂಬಗಳು ಸಂಭವಿಸಬಹುದು. ಈ ವಿಮಾನದಲ್ಲಿ ಯಾವುದೇ ಘಟನೆ ಅಥವಾ ಸುರಕ್ಷತೆಯ ಭಯವಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

Leave A Reply

Your email address will not be published.