ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆ!!!

ಬಾಲಿವುಡ್ ನಟ ರಾಜ್ ಬಬ್ಬರ್ ಗೆ ಜೈಲು ಶಿಕ್ಷೆಯಾಗಿದೆ. ಒಂದು ಕಾಲದ ಹೆಣ್ಮಕ್ಕಳ ಮೆಚ್ಚಿನ ನಟನಾಗಿದ್ದ ರಾಜ್ ಬಬ್ಬರ್ ತಮ್ಮ ನಟನೆಯಿಂದ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆದಿದ್ದರು. ನಟನೆಯ ಅನಂತರ ರಾಜಕೀಯಕ್ಕೆ ಧುಮುಕಿ ಅಲ್ಲಿ ತಮ್ಮ ಕರ್ತವ್ಯ ಮಾಡುತ್ತಿದ್ದು, ಅಷ್ಟೊಂದು ಸುದ್ದಿ ಮಾಡಿರಲಿಲ್ಲ. ಈಗ ರಾಜ್ ಬಬ್ಬರ್ ಮತ್ತೆ ಸುದ್ದಿಯಲ್ಲಿದ್ದಾರೆ.

26 ವರ್ಷಗಳ ಹಿಂದೆ ಜರುಗಿದ್ದ ಘಟನೆಯಿಂದಾಗಿ ಇದೀಗ ಬಾಲಿವುಡ್ ನಟ ರಾಜ್ ಬಬ್ಬರ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ಹೌದು, ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಪಬ್ಲಿಕ್ ಸರ್ವೆಂಟ್‌ಗೆ ಅಡ್ಡಿಪಡಿಸಿ, ಹಲ್ಲೆ ಮಾಡುವುದರ ಜೊತೆಗೆ ಮೂರು ಅಪರಾಧ ಎಸಗಿದ್ದಕ್ಕಾಗಿ ನಟ ರಾಜ್ ಬಬ್ಬರ್‌ಗೆ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 8500 ದಂಡವನ್ನೂ ನ್ಯಾಯಾಲಯ ವಿಧಿಸಿದೆ. ನ್ಯಾಯಾಲಯ ಈ ತೀರ್ಪು ನೀಡಿದ ಸಮಯದಲ್ಲಿ ಕೋರ್ಟ್‌ನಲ್ಲಿ ರಾಜ್ ಬಬ್ಬರ್ ಹಾಜರಿದ್ದರು.

1996 ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಯ ಮೇಲೆ ರಾಜ್ ಬಬ್ಬರ್ ಹಲ್ಲೆ ಮಾಡಿದ್ದರು. ಅನಂತರ ಆ ಮತಗಟ್ಟೆ ಅಧಿಕಾರಿ ರಾಜ್ ಬಬ್ಬರ್ ವಿರುದ್ಧ ದೂರು ನೀಡಿದ್ದರು. ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ರಾಜ್ ಬಬ್ಬರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆ ಸಮಯದಲ್ಲಿ ಸಮಾಜವಾದಿ ಪಕ್ಷದಿಂದ ರಾಜ್ ಬಬ್ಬರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಘಟನೆ ವಿವರ : ಚುನಾವಣಾಧಿಕಾರಿಯ ಶ್ರೀಕೃಷ್ಣ ಸಿಂಗ್ ರಾಣಾ ಎಂಬುವವರೇ ನಟ ಹಾಗೂ ರಾಜಕಾರಣಿ ರಾಜ್ ಬಬ್ಬರ್ ಅವರಿಂದ ಹಲ್ಲೆಗೊಳಗಾದ ವ್ಯಕ್ತಿ. ರಾಜ್ ಬಬ್ಬರ್ ಅವರು ತಮ್ಮ ಬೆಂಬಲಿಗರೊಂದಿಗೆ ಏಕಾಏಕಿ ಮತಗಟ್ಟೆಗೆ ನುಗ್ಗಿ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮತದಾನ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದ್ದಾರೆ ಎಂದು ವರದಿಯಾಗಿತ್ತು. ಹಲ್ಲೆಯ ಬಳಿಕ ಶ್ರೀಕೃಷ್ಣ ಸಿಂಗ್ ರಾಣಾ ಅವರು ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ರಾಜ್ ಬಬ್ಬರ್ ಹಾಗೂ ಅರವಿಂದ್ ಯಾದವ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿದ್ದರು.

ಹಿಂದಿ ಹಾಗೂ ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು ರಾಜ್ ಬಬ್ಬರ್, 1989ರಲ್ಲಿ ರಾಜ್ ಬಬ್ಬರ್ ರಾಜಕೀಯಕ್ಕೆ ಧುಮುಕಿದರು. ಮೊದಲು ಜನತಾದಳ ಸೇರಿದ ರಾಜ್ ಬಬ್ಬರ್ ನಂತರ ಸಮಾಜವಾದಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಬಾರಿ ಎಂಪಿ ಆದರು. ರಾಜ್ಯ ಸಭಾ ಸದಸ್ಯರೂ ಆಗಿದ್ದ ರಾಜ್ ಬಬ್ಬರ್ 2008ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ರಾಜಕಾರಣಿ ರಾಜ್ ಬಬ್ಬರ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಾಂಟ್ರವರ್ಸಿಯ ಕೇಂದ್ರಬಿಂದುವೂ ಆಗಿದ್ದರು.

Leave A Reply

Your email address will not be published.