ಬಿ.ಎಸ್ಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ, ಆಕೆಯ ಸಾವಿಗೆ ಕಾರಣವಾಯಿತೇ ಆತನ ಕರೆ?

ಬಿ.ಎಸ್ಸಿ ಕೃಷಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ, ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ನಿವಾಸಿ ಪವಿತ್ರಾ.

ಪವಿತ್ರಾ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುರಬೂರು ಗ್ರಾಮದ ಬಳಿ ಇರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಚಿಂತಾಮಣಿ ಕ್ಯಾಂಪಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯಿದ್ದ ವಸತಿ ನಿಲಯದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಈಕೆಯ ಸಾವಿಗೆ ಕಾರಣವಾಗಿದ್ದಾನೆ ಆಕೆಯ ಸ್ನೇಹಿತ.

ಏನಿದು ಘಟನೆ :
ಬಿಎಸ್ಸಿ ಕೃಷಿ ಪದವಿಯ ಮೂರನೆ ವರ್ಷದ ಪ್ರಾಯೋಗಿಕ ಪರೀಕ್ಷೆ ಇಂದು ಇತ್ತು. ಹೀಗಾಗಿ, ಸಹಪಾಠಿಗಳ ಜೊತೆ ನಿನ್ನೆ ರಾತ್ರಿ ಹಾಸ್ಟೆಲ್ ನಲ್ಲಿ ಪವಿತ್ರಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದ್ರೆ ಪದೆ ಪದೆ ಸಂತೋಷ ಅನ್ನೋ ಯುವಕ ಹೈದರಾಬಾದ್ ನಿಂದ ಕರೆ ಮಾಡುತ್ತಿದ್ದು, ನಿರಂತರವಾಗಿ ಪೋನ್ ರಿಂಗ್ ಆಗುತ್ತಿತ್ತು. ಇದರಿಂದ ರೋಸಿ ಹೋದ ಪವಿತ್ರಾಳ ಸ್ನೇಹಿತೆಯರು, ಪ್ರತ್ಯೇಕ ರೂಮ್ ನಲ್ಲಿ ಓದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪವಿತ್ರ ಹಾಸ್ಟೆಲ್ ನ 19 ನೆ ರೂಮ್ ನಲ್ಲಿ ಒಬ್ಬಳೆ ಓದಲು ಹೋಗಿದ್ದಾಳೆ. ಆಗ ಕೆಲವು ಹೊತ್ತು ತನ್ನ ಸ್ನೇಹಿತ ಸಂತೋಷ ಜೊತೆ ಪೋನ್ ನಲ್ಲಿ ವಿಡಿಯೊ ಕಾಲ್ ನಲ್ಲಿ ಮಾತನಾಡಿದ್ದಾಳೆ. ಪರೀಕ್ಷೆ ಇದೆ ಸಾಕು ಸಾಕು ಅಂದ್ರೂ ಅವನು ಬಿಟ್ಟಿಲ್ಲ. ಇದ್ರಿಂದ ಮನನೊಂದು ಪವಿತ್ರಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೈನ್ ನಲ್ಲೆ ಇದ್ದ ಆಕೆಯ ಸ್ನೇಹಿತ ತಕ್ಷಣ ಆಕೆಯ ಸ್ನೇಹಿತೆಯರಿಗೆ ಮೇಸೆಜ್ ಮಾಡಿದ್ದು, ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ, ರಕ್ಷಿಸಿ ಅಂತ ತಿಳಿಸಿದ್ದಾನೆ. ಆದ್ರೆ ಅಷ್ಟೊತ್ತಿಗೆ ಪವಿತ್ರಾ ಸಾವಿನ ಮನೆ ಸೇರಿದ್ದಳು.

ಘಟನೆ ಬಗ್ಗೆ ಚಿಂತಾಮಣಿಯ ಕುರಬೂರು ಕೃಷಿ ಮಹಾವಿದ್ಯಾಲಯದ ಡೀನ್ ಮಾತನಾಡಿದ್ದು, ‘ಯಾಕೆ ತಮ್ಮ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಗೊತ್ತಿಲ್ಲ, ಆಕೆಯ ಪೋನ್, ಡೆತ್ ನೋಟ್ ನ್ನು ಚಿಂತಾಮಣಿ ಪೊಲೀಸರು ಜಪ್ತಿ ಮಾಡಿದ್ದು, ತನಿಖೆಯ ನಂತರ ಸತ್ಯ ತಿಳಿಯಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತ ಮೃತಳ ತಂದೆ ಶ್ರೀನಾಥ್ ತಮ್ಮ ಮಗಳ ಸಾವಿಗೆ ಆಕೆಯ ಸ್ನೇಹಿತನ ಕಿರುಕುಳವೇ ಕಾರಣವೆಂದು ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ಆಕೆಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.