ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದ ಮಹಿಳೆ, ಕಾರಣ?

ಮಹಿಳೆಯರಿಗೆ ಚಿನ್ನ ಅಂದ್ರೇನೆ ಪ್ರಾಣ. ಎಲ್ಲಿ, ಹೇಗೆ ಖರೀದಿ ಮಾಡೋದು ಎಂದು ಯೋಚಿಸುತ್ತಿರುತ್ತಾರೆ. ಚಿನ್ನಕ್ಕಾಗಿ ಪ್ರಾಣವನ್ನೇ ಬಿಡುವವರ ನಡುವೆ, ಇಲ್ಲೊಬ್ಬಳು ಮಹಿಳೆ ಚಿನ್ನವನ್ನೇ ಕಸದ ಬುಟ್ಟಿಗೆ ಎಸೆದಿದ್ದಾರೆ. ಹೌದು. ಈ ಮಹಿಳೆ ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ 43 ಸವರನ್​ ಚಿನ್ನಾಭರಣವನ್ನು ಎಟಿಎಂ ಕಸದ ಬುಟ್ಟಿ ಒಳಗೆ ಎಸೆದು ಬಂದ ಘಟನೆ ಕಳೆದ ಸೋಮವಾರ ಮುಂಜಾನೆ ಚೆನ್ನೈ ಉಪನಗರ ಕುಂದ್ರಥೂರಿನ ಮುರುಗನ್​ ದೇವಸ್ಥಾನದ ರಸ್ತೆಯಲ್ಲಿ ನಡೆದಿದೆ. ಅಷ್ಟಕ್ಕೂ ಮಹಿಳೆಯ ಈ ವರ್ತನೆಗೆ ಕಾರಣವೇನು ಗೊತ್ತಾ!?

ಪೊಲೀಸ್​ ಮೂಲಗಳ ಪ್ರಕಾರ ಚಿನ್ನಾಭರಣ ಎಸೆದ 35 ವರ್ಷದ ಮಹಿಳೆ ಮಾನಸಿಕ ಅಸ್ವಸ್ಥಳು ಎಂದು ತಿಳಿದುಬಂದಿದೆ. ಖಿನ್ನತೆಯಿಂದ ತೀವ್ರವಾಗಿ ಬಳಲುತ್ತಿರುವ ಮಹಿಳೆಗೆ ನಿದ್ರೆಯಲ್ಲಿ ನಡೆಯುವ ಕಾಯಿಲೆಯು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸದ ಬುಟ್ಟಿಯ ಒಳಗೆ ಬ್ಯಾಗ್​ ಇರುವುದನ್ನು ನೋಡಿದ ಎಟಿಎಂನ ಭದ್ರತಾ ಸಿಬ್ಬಂದಿ ತಕ್ಷಣ ಕುಂದ್ರಥೂರ್​ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬ್ಯಾಗ್​ ತೆರೆದು ನೋಡಿದಾಗ ಅದರೊಳಗೆ ಚಿನ್ನಾಭರಣಗಳು ಇದ್ದವು ಎಂದು ಭದ್ರಾತಾ ಸಿಬ್ಬದಿ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ಬಳಿಕ ಎಟಿಎಂಗೆ ಸಂಬಂಧಿಸಿದ ಬ್ಯಾಂಕ್​ನ ಮ್ಯಾನೇಜರ್ ನೆರವು ಪಡೆದು ಪೊಲೀಸ್​ ದೂರು ದಾಖಲಿಸಲಾಯಿತು.

ತನಿಖಾ ವೇಳೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಓರ್ವ ಮಹಿಳೆ ಎಟಿಎಂ ಒಳಗೆ ಬಂದು ಚಿನ್ನಾಭರಣವನ್ನು ಕಸದ ಬುಟ್ಟಿಯ ಒಳಗೆ ಎಸೆದಿರುವುದು ಗೊತ್ತಾಗಿದೆ. ಇದೇ ಸಂದರ್ಭದಲ್ಲಿ ದಂಪತಿ ಜೋಡಿಯೊಂದು ತನ್ನ 35 ವರ್ಷದ ಮಗಳು ಮುಂಜಾನೆ 4ರಿಂದ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿರುವುದು ಪೊಲೀಸರಿಗೆ ತಿಳಿಯುತ್ತದೆ. ಅಲ್ಲದೆ, ಅದೇ ದಿನ ಪೊಲೀಸ್​ ಠಾಣೆಗೆ ಕರೆ ಮಾಡುವ ದಂಪತಿ ತಮ್ಮ ಮಗಳು 7 ಗಂಟೆಗೆ ಮನೆಗೆ ಹಿಂತಿರುಗಿದಳು ಎಂದು ಮಾಹಿತಿ ನೀಡುತ್ತಾರೆ.

ಇದಾದ ಬಳಿಕ ಪೊಲೀಸರು ದಂಪತಿಗೆ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತಾರೆ. ವಿಡಿಯೋದಲ್ಲಿ ಎಟಿಎಂ ಕಸದ ಬುಟ್ಟಿಯೊಳಗೆ ತಮ್ಮ ಮಗಳು ಚಿನ್ನಾಭರಣ ಎಸೆಯುವುದನ್ನು ನೋಡಿ ಶಾಕ್​ ಆಗುತ್ತಾರೆ. ಆಕೆ ತಮ್ಮ ಮಗಳೆಂದು ಖಚಿತಪಡಿಸುತ್ತಾರೆ. ಈ ಬಗ್ಗೆ ಮಾತನಾಡಿರುವ ಮಹಿಳೆಯ ಪಾಲಕರು ಪೊಲೀಸರು ಮಾಹಿತಿ ನೀಡುವವರೆಗೂ ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವ ವಿಚಾರ ಮನೆಗೆ ತಿಳಿದಿರಲಿಲ್ಲ ಎಂದಿದ್ದಾರೆ. ನಮ್ಮ ಮಗಳಿಗೆ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆ. ಅಲ್ಲದೆ, ಆಕೆ ಕಳೆದ ಕೆಲವು ತಿಂಗಳಿಂದ ಖಿನ್ನತೆಗೆ ಜಾರಿದ್ದಾಳೆ. ನಿಯಮಿತವಾಗಿ ಚಿಕಿತ್ಸೆಯನ್ನೂ ಕೊಡಿಸಲಾಗುತ್ತಿದೆ ಎಂದಿದ್ದಾರೆ.

ಸದ್ಯ ಪೊಲೀಸರು ದಂಪತಿಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ. ಎಟಿಎಂನ ಸೆಕ್ಯುರಿಟಿ ಗಾರ್ಡ್‌ನಿಂದ ಸಮಯೋಚಿತ ಎಚ್ಚರಿಕೆಯನ್ನು ನೀಡದಿದ್ದರೆ, ಆಭರಣಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ ಎಂದು ಕುಂದ್ರಥೂರು ಇನ್ಸ್‌ಪೆಕ್ಟರ್ ಚಂದ್ರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡ ಸೆಕ್ಯೂರಿಟಿ ಗಾರ್ಡ್ ಮತ್ತು ಬ್ಯಾಂಕ್ ಮ್ಯಾನೇಜರ್‌ಗೆ ಪೊಲೀಸರು ಧನ್ಯವಾದ ತಿಳಿಸಿದ್ದಾರೆ.

Leave A Reply

Your email address will not be published.