ದಕ್ಷಿಣ ಕನ್ನಡ : ಮುಂದುವರಿದ ಭಾರೀ ಮಳೆ, ಶಾಲಾ ಕಾಲೇಜುಗಳಿಗೆ ಜು.8 ಮತ್ತು 9 ರಜೆ ಘೋಷಣೆ

ಮಂಗಳೂರು : ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈಗಾಗಲೇ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕಳೆದ ಮೂರು ದಿನಗಳಿಂದ ಆರೆಂಜ್ ಅಲರ್ಟ್ ಇದ್ದ ಕಾರಣದಿಂದ ಮಳೆಯ ಅಬ್ಬರ ಕೂಡ ಸಾಕಷ್ಟು ಇತ್ತು. ಈಗ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ- ಕಾಲೇಜುಗಳಿಗೆ, ಸ್ನಾತಕೋತ್ತರ, ಐಟಿಐ, ಎಂಜಿನಿಯರಿಂಗ್ ಕಾಲೇಜು ಸಹಿತ ಜು.8, ಮತ್ತು 9 ರಂದು ರಜೆ ಘೋಷಿಸಲಾಗಿದೆ.

ಅದರ ಜತೆಗೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ನೀರು ಇರುವ ತಗ್ಗು ಪ್ರದೇಶಕ್ಕೆ, ಕೆರೆ, ನದಿತೀರ ಮತ್ತು ಸಮುದ್ರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರ ವಹಿಸಲು ಕೋರಲಾಗಿದೆ.

1) ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕೋರಲಾಗಿದೆ.

2) ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕೆಲಸದ ಸ್ತಳದಲ್ಲಿರತಕ್ಕದು ಮತ್ತು ಸದಾ ವಿಪತ್ತು ನಿರ್ವಹಣಾ ರೀತಿಯಲ್ಲಿ ಅಲರ್ಟ್ ಇರುವಂತೆ ಸೂಚಿಸಲಾಗಿದೆ.

3) ಪ್ರವಾಸಿಗಳು ಮತ್ತು ಸಾರ್ವಜನಿಕರು ನದೀ ತೀರಕ್ಕೆ ಹೋಗಬಾರದು.

4) ಸರ್ಕಾರ ಸೂಚಿಸಿದ ನೋಡಲ್ ಅಧಿಕಾರಿಗಳು ಜಾಗೃತರಾಗಿದ್ದು, ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾ ವಿಪತ್ತು ಕೇಂದ್ರದ ಜತೆ ಸದಾ ಸಂಪರ್ಕದಲ್ಲಿರಲು ಕೋರಲಾಗಿದೆ.

5) ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಆಯಾ ತಾಲೂಕಿನಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರುವುದು.

6) ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಅಥವಾ 0824 2442590 ಗೆ ದಿನದ 24*7 ಕೂಡಾ ಸಂಪರ್ಕಿಸಬಹುದು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ‌ಶಾಲಾ ಕಾಲೇಜುಗಳಿಗೆ ದಿನಾಂಕ 08.07.2022 ಮತ್ತು 09.07.2022 ರಂದೂ ರಜೆ ಘೋಷಿಸಲಾಗಿದೆ. ಹೆಚ್ಚಿನ ವಿವರಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಜಿಲ್ಲಾಧಿಕಾರಿಗಳು ಪ್ರಕಟಿಸಿದ ಈ ಮೇಲ್ಕಂಡ ನೋಟಿಫಿಕೇಶನ್ ಅನ್ನು ಗಮನಿಸಿ.

ಮಡಿಕೇರಿ: ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು.8ರಂದು (ಶುಕ್ರವಾರ) ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರೀ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ (ಜು.8) ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಆದೇಶಿಸಿದ್ದಾರೆ.

ಕರಾವಳಿಯಲ್ಲಿ ಧಾರಾಕಾರ ಮಳೆಯ ಪರಿಣಾಮ ರಾಜ್ಯ ಹವಾಮಾನ ಇಲಾಖೆಯಿಂದ ಮತ್ತೆ ರೆಡ್ ಅಲರ್ಟ್ ಘೋಷಣೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಜುಲೈ 9ರ ಬೆಳಗ್ಗೆ 8.30ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ.

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಭಾರೀ ಮಳೆ ಬೀಳುವ ಸೂಚನೆ ಇದೆ. 200 ಮಿಲಿ ಮೀಟರ್ ಗಿಂತಲೂ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿರುಗಾಳಿಯಿಂದಾಗಿ, ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರರು, ಪ್ರವಾಸಿಗರು ಸಮುದ್ರಕ್ಕೆ ನದಿಗಳಿಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ, ಮೂರೂ ಜಿಲ್ಲೆಗಳಲ್ಲಿ ಎನ್ ಡಿಆರ್ ಎಫ್ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನೂ ಸನ್ನದ್ಧ ಇರಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನದಿಗಳೂ ತುಂಬಿ ಹರಿಯುತ್ತಿದ್ದು ತೀರದ ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದೆ.

ಈಗಾಗಲೇ ಉಡುಪಿ ಜಿಲ್ಲೆಯ ಬೈಂದೂರು
ತಾಲೂಕಿನಲ್ಲಿ ಸೌಪರ್ಣಿಕಾ ನದಿಯಲ್ಲಿ ನೆರೆ ಕಾಣಿಸಿಕೊಂಡಿರುವುದರಿಂದ ಅಲ್ಲಿನ ನಾವುಂದ ಗ್ರಾಮದಲ್ಲಿ ಹಲವಾರು ಮನೆಗಳು ಮುಳುಗಡೆಯಾಗಿವೆ. ಅಲ್ಲಿನ ಜನರನ್ನು ಎನ್ ಡಿಆರ್ ಎಫ್ ಸಿಬಂದಿ ಸುರಕ್ಷಿತವಾಗಿ ತೆರವು ಮಾಡುವ ಕಾರ್ಯ ಮಾಡುತ್ತಿದ್ದಾರೆ.

Leave A Reply

Your email address will not be published.