ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ

ಕಡಬ : ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ.

ಇದರಿಂದಾಗಿ ಕುಮಾರಧಾರ ನದಿಯ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.

ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಹಾಗೂ ಇದರ ಉಪ ನದಿಗಳು ಜಿಲ್ಲೆಯ ಹಲವು ಕಡೆಗಳಲ್ಲಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.

ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟ ಮಾತ್ರವಲ್ಲದೆ, ಸಾವಪುಟದ ಬಳಿಯಿರುವ ದೇವರಕಟ್ಟೆಯೂ ಭಾಗಶಃ ಮುಳುಗಡೆಯಾಗಿದೆ. ಈ ಕಾರಣದಿಂದಾಗಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ಸಾಧವಿಲ್ಲವಾಗಿದೆ.

ಹಾಗಾಗಿ ಭಕ್ತಾಧಿಗಳು ಪ್ರವಾಹದ ನೀರಿನಲ್ಲೇ ತೀರ್ಥಸ್ನಾನವನ್ನು ನೆರವೇರಿಸುತ್ತಿದ್ದಾರೆ. ಆದರೂ ದೇವಸ್ಥಾನದ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ನಾನಘಟ್ಟದಲ್ಲಿ ರಾತ್ರಿ- ಹಗಲು ಎರಡು ಜನರಿರುವ ರಕ್ಷಕ ದಳವನ್ನು ನಿಯೋಜನೆ ಮಾಡಲಾಗಿದೆ. ಭಕ್ತಾಧಿಗಳಿಗೆ ತೀರ್ಥಸ್ನಾನ ನೆರವೇರಿಸಲು ನೆರವಾಗುವ ನಿಟ್ಟಿನಲ್ಲಿ ಕುಮಾರಧಾರಾ ನದಿ ತೀರದಲ್ಲಿ ಹಗ್ಗವನ್ನು ಅಳವಡಿಸಿ, ಹಗ್ಗದ ಸಹಾಯದ ಮೂಲಕ ತೀರ್ಥಸ್ನಾನ ನೆರವೇರಿಸಲು ಅನುವು ಮಾಡಿಕೊಡಲಾಗಿದೆ.

ಸ್ನಾನಘಟ್ಟ ಮಾತ್ರವಲ್ಲದೆ ದೇವಸ್ಥಾನದ ಪಕ್ಕದಲ್ಲೇ ಹರಿಯುವ ದರ್ಪಣ ತೀರ್ಥ ಹೊಳೆಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಹೊಳೆ ನೀರು ಆಸುಪಾಸಿನ ಕೃಷಿ ತೋಟಗಳಿಗೆ ನುಗ್ಗಲಾರಂಭಿಸಿದೆ.

Leave A Reply

Your email address will not be published.