ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಬಾಲಕನನ್ನು ಹಿಂದಿರುಗಿಸಿದ ಬಿಎಸ್‌ಎಫ್ ಯೋಧರು- ಮಾನವೀಯತೆಯ ದೃಶ್ಯ ವೈರಲ್

ಭಾರತೀಯರ ಮನಸ್ಸು ಮಾನವೀಯತೆಯಿಂದ ಕೂಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೆಷ್ಟೇ ನಮ್ಮ ದೇಶ ಅನ್ನೋ ಕಿಚ್ಚು ಇದ್ದರೂ, ತಪ್ಪಿಲ್ಲ ಎಂಬುವಲ್ಲಿ ಕೈ ಜೋಡಿಸಿ ಸಹಾಯ ಮಾಡುವವರೇ ನಮ್ಮ ಹೆಮ್ಮೆಯ ವೀರರು. ಇಂತಹ ಭಾರತೀಯ ಸೇನೆಯ ಮಾನವೀಯ ಮುಖವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ಅರಿವಿಲ್ಲದೇ ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು ಗಡಿ ಭದ್ರತಾ ಪಡೆ ಪಾಕಿಸ್ತಾನಿ ರೇಂಜರ್‌ಗಳಿಗೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಫಿರೋಜ್‌ಪುರ ಸೆಕ್ಟರ್‌ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಐಬಿ ಬೇಲಿ ಬಳಿ ಮಗು ಅಳುತ್ತಿರುವುದನ್ನು ಬಿಎಸ್‌ಎಫ್ ಯೋಧರು ಗಮನಿಸಿದ್ದಾರೆ. ಮಗು ಬೇಕಂತಲೇ ಗಡಿ ದಾಟಿ ಬಂದಿಲ್ಲ ಎಂಬುದು ಈ ಸಮಯದಲ್ಲಿ ಭಾರತೀಯ ಯೋಧರ ಗಮನಕ್ಕೆ ಬಂದಿದೆ. ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್, ರಾತ್ರಿ 9:45 ರ ಸುಮಾರಿಗೆ ಪಾಕಿಸ್ತಾನ ರೇಂಜರ್ಸ್‌ಗೆ ತೆರಳಿ ಸೌಹಾರ್ದತೆಯ ಸೂಚಕವಾಗಿ ಮಗುವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

‘ಶುಕ್ರವಾರ ರಾತ್ರಿ 7:15 ರ ಸುಮಾರಿಗೆ, 182 ಬಿಎನ್ ಬಿಎಸ್‌ಎಫ್, ಫಿರೋಜ್‌ಪುರ ಸೆಕ್ಟರ್‌ನ ಪಡೆಗಳು ಸುಮಾರು 3 ವರ್ಷ ವಯಸ್ಸಿನ ಪಾಕಿಸ್ತಾನಿ ಮಗುವನ್ನು ಗಡಿ ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದಾಗ ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.

ಈ ಮುನ್ನ ಕೂಡ BSF 6 ಪಾಕಿಸ್ತಾನಿ ಯುವಕರನ್ನು ಪಾಕ್ ರೇಂಜರ್‌ಗಳಿಗೆ ಹಸ್ತಾಂತರಿಸಿದ್ದು, ಕಳೆದ ವರ್ಷ ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯಿಂದ ಭಾರತದ ಕಡೆಗೆ “ಅಚಾತುರ್ಯದಿಂದ” ದಾಟಿದ ಆರು ಪಾಕಿಸ್ತಾನಿ ಯುವಕರನ್ನು BSF ಪಾಕಿಸ್ತಾನ ರೇಂಜರ್‌ಗಳಿಗೆ ಹಸ್ತಾಂತರಿಸಿತ್ತು.

Leave A Reply

Your email address will not be published.