ಸಾರ್ವಜನಿಕ ರಜಾದಿನ ಭಾನುವಾರವೇ ಏಕೆ?

ಅದು ಯಾವುದೇ ಕೆಲಸ ಇರಲಿ, ಒತ್ತಡ ಇರಲಿ. ಇದೆಲ್ಲದರಿಂದ ರಿಲೀಫ್ ಪಡೆಯಲು ಪ್ರತಿಯೊಬ್ಬ ಉದ್ಯೋಗಿಯೂ ರಜೆಗಾಗಿ ಕಾಯುತ್ತಾನೆ. ಹೀಗಾಗಿ ಭಾನುವಾರಕ್ಕಾಗಿ ಕಾಯೋದು ಖಾಯಂ. ಉದ್ಯೋಗಿಗಳು ಮಾತ್ರವಲ್ಲದೆ ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಸಹ ಭಾನುವಾರ ರಜಾ ದಿನವಾಗಿರುತ್ತೆ.

ಆದರೆ ಈ ಭಾನುವಾರ ಸಾರ್ವಜನಿಕ ರಜಾದಿನವಾಗಿ ಏಕೆ ಜಾರಿಗೆ ಬಂದಿದೆ. ಇದನ್ನು ಏಕೆ ಜಾರಿಗೆ ತರಲಾಯಿತು ಎಂಬುದು ಅದೆಷ್ಟೋ ಜನಕ್ಕೆ ಇಂದಿಗೂ ಅರಿವಿಲ್ಲದೆ ಹೋಗಿದೆ. ಇಂತವರಿಗಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೌದು. ಎಲ್ಲ ಉದ್ಯೋಗಿಗಳಿಗೂ ವಿಶ್ರಾಂತಿಗಾಗಿ ಭಾನುವಾರ ರಜೆ ನೀಡುತ್ತಾರೆ. ಅದು ಯಾಕೆ ಗೊತ್ತಾ? ಭಾರತೀಯ ವೈದಿಕ ವಿಜ್ಞಾನದ ಪ್ರಕಾರ, ಪ್ರತಿದಿನ ಪ್ರಮುಖ ಗ್ರಹಗಳಿಗೆ ಮೀಸಲಾಗಿರುತ್ತದೆ. ಅಂದರೆ ಸಂಪೂರ್ಣವಾಗಿ ಒಂಬತ್ತು ಗ್ರಹಗಳು, ಅದರಲ್ಲಿ ಭಾನುವಾರ ಸೂರ್ಯನಿಗಾಗಿ ಮೀಸಲಾಗಿರುತ್ತದೆ. ಸೂರ್ಯನನ್ನು ಜೀವನದ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಆದರೆ ಪ್ರಾಚೀನ ಭಾರತದಲ್ಲಿ ಸಾಪ್ತಾಹಿಕ ರಜಾದಿನಗಳು ಇರಲಿಲ್ಲ, ಆದರೂ ಹಬ್ಬಗಳ ಆಚರಣೆಗಳು ಇದ್ದವು, ಜನರು ಇಡೀ ದಿನ ಆಚರಣೆಯೊಂದಿಗೆ ತೊಡಗಿಸಿಕೊಂಡಿದ್ದರಿಂದ ರಜಾದಿನವೆಂದು ಪರಿಗಣಿಸಲಾಗುತ್ತಿತ್ತು. ಪ್ರಾಚೀನ ಕಾಲದಿಂದಲೂ ಭಾನುವಾರ ಸೂರ್ಯ ದೇವರಿಗಾಗಿ ಮೀಸಲಾದ ದಿನವಾಗಿದೆ. ಪ್ರಪಂಚದ ಹೆಚ್ಚಿನ ಪ್ರಾಚೀನ ನಾಗರಿಕತೆಗಳಲ್ಲಿ, ಸೂರ್ಯ ದೇವರಿಗೆ ಪ್ರಮುಖ ಪ್ರಾಮುಖ್ಯತೆ ನೀಡಲಾಗಿದೆ. ಜನರು ಭಾನುವಾರದಿಂದೇ ತಮ್ಮ ಪ್ರಾರ್ಥನೆಯನ್ನು ಅರ್ಪಿಸುತ್ತಿದ್ದರು. ಭಾನುವಾರ ದೈವಿಕ ದಿನವಾದ್ದರಿಂದ, ಭಾನುವಾರವನ್ನು ರಜಾದಿನವೆಂದು ಪರಿಗಣಿಸಲಾಗುತ್ತದೆ.

ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ, ಭಾರತದಲ್ಲಿನ ಗಿರಣಿ ಕಾರ್ಮಿಕರು ವಾರದ ಎಲ್ಲಾ ಏಳು ದಿನಗಳವರೆಗೆ ಶ್ರಮಿಸಬೇಕಾಗಿತ್ತು. ವಿಶ್ರಾಂತಿ ಪಡೆಯಲು ಅವರಿಗೆ ಯಾವುದೇ ರಜಾದಿನಗಳು ಸಿಗುತ್ತಿರಲಿಲ್ಲ. ಆದರೆ ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಿಟಿಷ್ ಕಾರ್ಮಿಕರು ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ವಾರಪೂರ್ತಿ ಭಾರತೀಯರು ಕಷ್ಟ ಪಟ್ಟು ದುಡಿದ್ರೆ, ಬ್ರಿಟಿಷ್ ಅಧಿಕಾರಿಗಳು ಮಾತ್ರ ಭಾನುವಾರ ರಜೆ ತೆಗೆದುಕೊಳ್ಳುತ್ತಿದ್ದರು ಮತ್ತು ಚರ್ಚ್‌ಗಳಿಗೆ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದರು. ಈ ಸಮಯದಲ್ಲಿ ಇದರ ವಿರುದ್ಧ ಧ್ವನಿಯೆತ್ತಿದ್ದ ಗಿರಣಿ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್ ಮೇಘಾಜಿ ಲೋಖಂಡೆ, ಬ್ರಿಟಿಷರ ಮುಂದೆ ಸಾಪ್ತಾಹಿಕ ರಜೆಯ ಪ್ರಸ್ತಾಪವನ್ನು ಮಂಡಿಸಿದ್ರು.

ಆರು ದಿನಗಳ ಕಾಲ ಶ್ರಮಿಸಿದ ನಂತರ, ಕಾರ್ಮಿಕರು ತಮ್ಮ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಒಂದು ದಿನವನ್ನು ಪಡೆಯಬೇಕು. ಭಾನುವಾರ ಹಿಂದೂ ದೇವತೆ ‘ಖಂಡೋಬಾ’ ದಿನ. ಆದ್ದರಿಂದ ಭಾನುವಾರವನ್ನು ರಜಾದಿನವೆಂದು ಘೋಷಿಸಬೇಕು ‘ಎಂದು ಲೋಖಂಡೆ ಬ್ರಿಟೀಷರ ಮುಂದೆ ಪ್ರಸಾಪ ಮಾಡಿದರು. ಆದರೆ ಅವರ ಪ್ರಸ್ತಾಪವನ್ನು ಬ್ರಿಟಿಷ್ ಅಧಿಕಾರಿಗಳು ತಿರಸ್ಕರಿಸಿದರು.

7 ವರ್ಷಗಳ ಸುದೀರ್ಘ ಹೋರಾಟದ ನಂತರ, ಜೂನ್ 10, 1890 ರಂದು ಬ್ರಿಟಿಷ್ ಸರ್ಕಾರ ಭಾನುವಾರವನ್ನು ರಜಾದಿನವೆಂದು ಘೋಷಿಸಿತು. ಭಾನುವಾರ ರಜಾದಿನವೆಂದು ಘೋಷಣೆ ಬಳಿಕ ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ಅರ್ಧ ಗಂಟೆ ವಿರಾಮ ನೀಡಬೇಕು ಎಂಬುದನ್ನು ಜಾರಿಗೊಳಿಸಿದ್ದರು. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸಂತಸ ತಂದಿತ್ತು.

Leave A Reply

Your email address will not be published.