ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ನಾಯಿ ಕಚ್ಚಿ, ಲಸಿಕೆ ತೆಗೆದುಕೊಂಡರೂ ರೇಬೀಸ್ ಸೋಂಕಿಗೆ ತುತ್ತಾಗಿ ಸಾವಿಗೀಡಾಗಿರುವ ದಾರುಣ ಘಟನೆಯೊಂದು ನಡೆದಿದೆ. ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ಈ ಘಟನೆ ನಡೆದಿದೆ.
ಶ್ರೀಲಕ್ಷ್ಮಿ(19) ಎಂಬ ಯುವತಿಯೇ ಬೀದಿ ನಾಯಿ ಕಚ್ಚಿ ದಾರುಣ ಸಾವು ಕಂಡ ವಿದ್ಯಾರ್ಥಿನಿ. ಮೇ 30 ರಂದು ಯುವತಿಗೆ ನಾಯಿ ಕಚ್ಚಿದೆ, ನಂತರ ವೈದ್ಯರನ್ನು ಸಂಪರ್ಕಿಸಿದಾಗ ಅವರು ಸೂಚಿಸಿದ ಎಲ್ಲಾ ಅಗತ್ಯ ಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದಳಂತೆ.
ಆರಂಭಿಕ ದಿನಗಳಲ್ಲಿ ಯುವತಿಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ರೇಬೀಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ತೀವ್ರ ಜ್ವರ ಕಾಣಿಸಿಕೊಂಡ ಪರಿಣಾಮ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ಇಂದು ಮುಂಜಾನೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
ನಾಯಿ ಕಡಿದು 7 ವರ್ಷದ ಬಾಲಕ ಸಾವು: ಇದೇ ರೀತಿಯ ಪ್ರಕರಣವೊಂದು ಕಳೆದ ವರ್ಷ ಕೇರಳದ ಕಾಸರಗೂಡಿನಲ್ಲಿ ನಡೆದಿದ್ದು, 7 ವರ್ಷದ ಬಾಲಕನಿಗೆ ನಾಯಿ ಕಡಿದಿದೆ. ತಕ್ಷಣ ಸರಿಯಾದ ಲಸಿಕೆ ಪಡೆದರೂ ಮೂರು ವಾರಗಳ ನಂತರ ಬಾಲಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
You must log in to post a comment.