ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸರಕಾರ !!!

ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 5300 ಮಂದಿ ಪೌರ ಕಾರ್ಮಿಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು ಹಾಗೂ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ಎಂಟಿಬಿ ನಾಗರಾಜ್ ಈ ಮಾಹಿತಿ ತಿಳಿಸಿದ್ದಾರೆ. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದೆ. ಹಾಗಾಗಿ, ಪೌರ ಕಾರ್ಮಿಕ ಸಂಘಟನೆಗಳು ಜುಲೈ 1 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.

ಆರ್ಥಿಕ ಇಲಾಖೆಯು ಈಗಾಗಲೇ 5300 ಪೌರ ಕಾರ್ಮಿಕರ ನೇಮಕಾತಿಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸಚಿವರು ಸೂಚಿಸಿದರು.

ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲಾ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ
ಕ್ರಮಕೈಗೊಳ್ಳುವಂತೆ ಸಚಿವ ಎಂಟಿಬಿ ನಾಗರಾಜ್ ನಿರ್ದೇಶನ ನೀಡಿದರು.

ಅಲ್ಲದೆ, ಪೌರ ಕಾರ್ಮಿಕರ ಇನ್ನುಳಿದ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದರು.

2018 ರಲ್ಲಿ ರಚಿಸಲಾಗಿರುವ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯದಲ್ಲಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರಗಳನ್ನು ಒಂದು ವಾರದ ಒಳಗಾಗಿ ಸಂಗ್ರಹಿಸಿ ಅಗತ್ಯ ಶಿಫಾರಸ್ಸುಗಳೊಂದಿಗೆ ಕಡತ ಮಂಡಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Leave A Reply

Your email address will not be published.