ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್‌ಗಳಿಗೆ ಬೀಗ !

ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್‌ಗಳಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಬೀಗ ಹಾಕಿದೆ.

ವಿಶ್ವ ಪ್ರಸಿದ್ಧ ಹಂಪಿ, ಕಡ್ಡಿರಾಂಪುರ ಸುತ್ತಮುತ್ತ ಕೃಷಿ ಜಮೀನಿನಲ್ಲಿ 16 ರೆಸಾರ್ಟ್‌ಗಳು ತಲೆ ಎತ್ತಿದ್ದವು. ಅನುಮತಿ ಪಡೆದುಕೊಳ್ಳದೇ ಕೃಷಿ ಜಮೀನಿನಲ್ಲಿ ಈ ರೆಸಾರ್ಟ್‌ಗಳನ್ನು ನಡೆಸಲಾಗುತ್ತಿತ್ತು ಎಂದು ಕೆಲ ತಿಂಗಳ ಹಿಂದೆಯೇ ಕಾರಣ ಕೇಳಿ ಪ್ರಾಧಿಕಾರವು ನೋಟಿಸ್‌ ಜಾರಿ ಮಾಡಿತ್ತು. ಯಾರೊಬ್ಬರೂ ಸೂಕ್ತ ಕಾರಣ ನೀಡಿರಲಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡ ಪ್ರಾಧಿಕಾರವು ಎಲ್ಲ ರೆಸಾರ್ಟ್‌ಗಳಿಗೆ ಕಲ್ಪಿಸಿದ್ದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಅನಂತರ ಎಲ್ಲಕ್ಕೂ ಬೀಗ ಮುದ್ರೆ ಹಾಕಿದೆ

ಪ್ರವಾಸೋದ್ಯಮ ಬೆಳೆಯಬೇಕೆಂದರೆ ಪ್ರವಾಸಿಗರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಿಕೊಡಬೇಕು. ಆ ಕೆಲಸ ಪ್ರಾಧಿಕಾರ ಮಾಡಿಲ್ಲ. ಸರ್ಕಾರಕ್ಕೆ ಸೇರಿದ ಒಂದೆರಡು ಹೋಟೆಲ್‌ಗಳಿವೆ. ವಾರಾಂತ್ಯಕ್ಕೆ ಸಾವಿರಾರು ಜನ ಹಂಪಿ, ಅಂಜನಾದ್ರಿಗೆ ಬಂದು ಹೋಗುತ್ತಾರೆ. ಎಲ್ಲ ರೆಸಾರ್ಟ್‌ಗಳು ಭರ್ತಿಯಾಗುತ್ತಿದ್ದವು. ಈಗ ಎಲ್ಲ ರೆಸಾರ್ಟ್‌ ಮುಚ್ಚಿಸಿದರೆ ಪ್ರವಾಸಿಗರು ಎಲ್ಲಿ ಉಳಿದುಕೊಳ್ಳುತ್ತಾರೆ? ನಿಯಮ ಸಡಿಲಿಸಿ ರೆಸಾರ್ಟ್‌ ನಡೆಸಲು ಅವಕಾಶ ಕಲ್ಪಿಸಬೇಕಿತ್ತು’ ಎಂದು ಹೆಸರು ಹೇಳಲಿಚ್ಛಿಸದ ರೆಸಾರ್ಟ್ ಮಾಲೀಕರು ಹೇಳಿದರು.

‘ರೆಸಾರ್ಟ್‌ಗಳಿಂದ ಮಾಲೀಕರಷ್ಟೇ ಅಲ್ಲ, ಸುತ್ತಮುತ್ತಲಿನ ಜನರಿಗೆ ಉದ್ಯೋಗಾವಕಾಶಗಳು ಸಿಕ್ಕಿದ್ದವು. ರೈತರು ನೇರವಾಗಿ ಅವರ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಪ್ರವಾಸೋದ್ಯಮದಿಂದ ಉದ್ಯೋಗಗಳ ಸರಪಳಿಯೇ ಸೃಷ್ಟಿಯಾಗುತ್ತದೆ. ಆದರೆ, ಪ್ರಾಧಿಕಾರ ಯಾವುದನ್ನೂ ನೋಡದೇ ನಿಯಮದ ಹೆಸರಿನಲ್ಲಿ ರೆಸಾರ್ಟ್‌ಗಳನ್ನು ಮುಚ್ಚಿಸಿದೆ. ಇದರಿಂದ ಐಷಾರಾಮಿ ಹೋಟೆಲ್‌ಗಳವರಿಗೆ ಲಾಭವಾಗುತ್ತದೆ’ ಎಂದು ತಿಳಿಸಿದರು

Leave A Reply

Your email address will not be published.