ಕೆಲಸಕ್ಕೆ ಸೇರಿದ ಆರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ 25 ರ ಹರೆಯದ ವಕೀಲೆ!

ಕೆಲಸಕ್ಕೆ ಸೇರಿದ ಆರೇ ತಿಂಗಳಿಗೆ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆಯೊಂದು ಭಾರೀ ಚರ್ಚೆಗೆ ಗುರಿಯಾಗಿದೆ. ಈ ಸಾವಿನ ಹಿಂದೆ ಏನೋ ನಿಗೂಢ ಕಾರಣವಿದೆ ಎಂದು ಜನ ಮಾತಾಡುತ್ತಿದ್ದಾರೆ.

ಕೇರಳದ ಕೊಟ್ಟಾರಕ್ಕರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮೃತ ವಕೀಲೆಯನ್ನು ಅಷ್ಟಮಿ ಅಜಿತ್ ಕುಮಾರ್ (25) ಎಂದು ಗುರುತಿಸಲಾಗಿದೆ. ಈ ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಈಕೆ ಕಡವೂರ್ ಮೂಲದವರು. ಕೊಟ್ಟಾರಕ್ಕರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ಈಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಕೆ ಕೊಟ್ಟಾರಕ್ಕರದ ನ್ಯಾಯಾಲಯದಲ್ಲಿ 2022ರ ಜನವರಿಯಿಂದ ವಕೀಲಿ ವೃತ್ತಿ ನಡೆಸುತ್ತಿದ್ದರು.

ಈ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಅಷ್ಟಮಿ ಒಬ್ಬರೇ ಇದ್ದರು. ಸಂಜೆ ಪಾಲಕರು ಮನೆಗೆ ಬಂದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ಅಷ್ಟಮಿ ಸಾವಿನ ಬಗ್ಗೆ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಅಷ್ಟಮಿ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಏನಾದರೂ ಸುಳಿವು ಸಿಗಬಹುದಾ ಎಂದು ಮೊಬೈಲ್ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಷ್ಟಮಿ ಸಾವು ಕೊಲೆಯಲ್ಲ ಎಂದು ಹೇಳಲಾಗಿದೆ.

Leave A Reply

Your email address will not be published.