ಮುಸ್ಲಿಂ ಯುವಕರು ಸಶಸ್ತ್ರ ಪಡೆಗಳಿಗೆ ಸೇರುವಂತೆ ಉತ್ತೇಜಿಸಲು ಇಂದಿನಿಂದ ವಿಶೇಷ ಅಭಿಯಾನ !!

ಭಾರತೀಯ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆ ಉಳಿದ ಸಮುದಾಯಗಳಿಗಿಂತ ತೀರಾ ಕಮ್ಮಿ. ಹಾಗಾಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ಮುಸ್ಲಿಂ ಯುವಕರು ಸೇರುವಂತೆ ಉತ್ತೇಜಿಸಲು ಮುಸ್ಲಿಂ ಸಂಘಟನೆಗಳಿಂದ ಶುಕ್ರವಾರದಿಂದ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ.

ಪ್ರಮುಖ ಮುಸ್ಲಿಂ ಸಂಘಟನೆಗಳು, ವೃತ್ತಿಪರರು ಹಾಗೂ ಇಮಾಮ್‌ಗಳ ಸಂಘಗಳು ಅಗ್ನಿಪಥ್ ಯೋಜನೆ ಮೂಲಕ ಮುಸ್ಲಿಂ ಯುವಕರೂ ಭಾರತೀಯ ಸೇನೆ ಸೇರುವಂತೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ವ್ಯಾಪಕ ಪ್ರತಿಭಟನೆಗಳ ನಡುವೆ ಕಾನ್ಪುರದಲ್ಲಿ ಬದಲಾವಣೆ ತರಲಾಗುತ್ತಿದ್ದು, ಶುಕ್ರವಾರ ಜೂನ್ (24) ಕಾನ್ಪುರದ ಧರ್ಮಗುರುಗಳು ಅಗ್ನಿಪಥ್ ಯೋಜನೆಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಯುವಕರನ್ನು ಒತ್ತಾಯಿಸಲಿದ್ದಾರೆ.

ಶುಕ್ರವಾರ ಕಾನ್ಪುರದಲ್ಲಿ ಮುಸ್ಲಿಮರು ಪ್ರಾರ್ಥನೆಗೂ ಮುನ್ನ ಎಲ್ಲ ಮಸೀದಿಗಳಲ್ಲಿ ಮನವಿ ಮಾಡಲಿದ್ದಾರೆ. ಮುಸ್ಲಿಮರಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿರುವ ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ (AMP) ಸಂಸ್ಥೆಯು ಈ ಅಭಿಯಾನವನ್ನು ಮುನ್ನಡೆಸಲಿದೆ. ಜೊತೆಗೆ ಉಪಕ್ರಮಕ್ಕಾಗಿ ಮುಸ್ಲಿಂ ಧರ್ಮಗುರುಗಳನ್ನೂ ತೊಡಗಿಸಿಕೊಳ್ಳಲಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮುಸ್ಲಿಂ ಮುಖಂಡ ಶಾಹಿದ್ ಕಮ್ರಾನ್ ಖಾನ್ ಹೇಳಿದ್ದಾರೆ.

10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು ಎಂದು ಧರ್ಮಗುರುಗಳು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಬಾರಿ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಬಹುದೇ ಎಂಬುದನ್ನು ಕಾದುನೋಡಬೇಕಿದೆ.

Leave A Reply

Your email address will not be published.