ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಗುಡ್ ನ್ಯೂಸ್!

ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಯಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು, ಮಾತೃತ್ವ ರಜೆ ಸೌಲಭ್ಯವನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ಇಲಾಖೆಗಳಲ್ಲಿ, ಅಂಗ ಸಂಸ್ಥೆಗಳಾದ ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ನೌಕರರಿಗೆ ಮಾತೃತ್ವ ರಜೆಯ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಸಹಮತಿಸಿದೆ ಎಂದು ತಿಳಿಸಿದ್ದಾರೆ.

ಇನ್ನೂ ಮಾತೃತ್ವ ರಜೆಯನ್ನು ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದು. ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು 6 ವಾರಗಳನ್ನು ಮೀರಬಾರದು ಎಂದು ತಿಳಿಸಿದ್ದಾರೆ.

ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥಿತವಾಗಿರಬೇಕು. ಮಾತೃತ್ವ ರಜೆಯ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ ಎಂದು ಹೇಳಿದ್ದಾರೆ.

ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ, ಈ ಮಾತೃತ್ವ ರಜೆಯನ್ನು ಮಂಜೂರಿಗೆ ಅರ್ಹರಿಲ್ಲ. ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಸ್ವಯಂ ಘೋಷಣೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸಬೇಕು. ದಿನಾಂಕ 01-04-2022ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿರೋದಾಗಿ ತಿಳಿಸಿದ್ದಾರೆ.

Leave A Reply

Your email address will not be published.