ಪುರುಷರಿಗೆ ಶಾಕಿಂಗ್ ಸುದ್ದಿ!!

ಬೆಂಗಳೂರು: ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಪುರುಷರಿಗೆ ಶಾಕಿಂಗ್ ಸುದ್ದಿ ದೊರಕಿದ್ದು, ರಾಜಧಾನಿಯಲ್ಲಿ ಪುರುಷರ ಆರೋಗ್ಯ ನಿರ್ಲಕ್ಷ್ಯ ಹೆಚ್ಚಳವಾಗಿ ರೋಗಗಳು ಪತ್ತೆಯಾದಂತಹ ಆತಂಕದ ಮಾಹಿತಿ ಹೊರಬಿದ್ದಿದೆ.

ದೇಶದಲ್ಲಿ ಮಹಿಳೆಯರ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಪುರುಷರ ಸಾವಿನ ಪ್ರಮಾಣವೇ ಹೆಚ್ಚಿದ್ದು, ಇದಕ್ಕೆ ಪುರುಷರ ಅರೋಗ್ಯ ನಿರ್ಲಕ್ಷ್ಯವೇ ಕಾರಣ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರಿನ ನ್ಯೂರಾ ವೈದ್ಯಕೀಯ ಸಂಸ್ಥೆಯು ಅಧ್ಯಯನ ನಡೆಸಿದ್ದು, ಇದೀಗ ಶಾಕಿಂಗ್ ಸುದ್ದಿ ನೀಡಿದ್ದಾರೆ.

ಕಳೆದ ವರ್ಷ ನಗರದಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದ 2000 ವಯಸ್ಕ ಪುರುಷರನ್ನು ಪರೀಕ್ಷೆಗೆ ಒಳಪಡಿಸಿದಾಗ ಹಲವರು ರೋಗಗಳೊಂದಿಗೆ ಜೀವಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನ್ಯೂರಾದ ವೈದ್ಯಕೀಯ ನಿರ್ದೇಶಕ ಡಾ. ತೌಸಿಫ್‌ ಅಹ್ಮದ್‌ ತಂಗಲ್ವಾಡಿ, ‘2000 ಮಂದಿ ಆರೋಗ್ಯವಂತ ಪುರುಷರ ತಪಾಸಣೆ ನಡೆಸಿದಾಗ ಇವರಲ್ಲಿ ಶೇ.70 ಮಂದಿ ಒಳಾಂಗಗಳ ಕೊಬ್ಬು ಹೊಂದಿರುವ ಅಘಾತಕಾರಿ ಮಾಹಿತಿ ಲಭಿಸಿದೆ. ಈ ಕೊಬ್ಬು ಹೃದ್ರೋಗ ಮತ್ತು ಮಧುಮೇಹಕ್ಕೆ ಕಾರಣವಾಗಲಿದೆ. ಜತೆಗೆ ಶೇ.35 ಪುರುಷರಲ್ಲಿ ಮಧುಮೇಹ, ಶೇ.20 ಮಂದಿಯಲ್ಲಿ ಪೂರ್ವ ಮಧುಮೇಹ, ಶೇ.25 ಪುರುಷರ ಹೃದ್ರೋಗ ಕಾರಣದಿಂದ ಪರಿಧಮನಿಗಳಲ್ಲಿ ಕ್ಯಾಲ್ಸಿಯಂ ಅಂಶ ಪತ್ತೆಯಾಗಿದ್ದು, ಭವಿಷ್ಯದಲ್ಲಿ ಹೃದಯಾಘಾತಕ್ಕೆ ಸಿಲುಕುವ ಅಪಾಯ ಹೆಚ್ಚಿರುತ್ತದೆ ಎಂದು ತಿಳಿಸಿದರು.

ಮಹಿಳೆಯರಿಗಿಂತ ಪುರುಷರು ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದಾಗಿ 2019ರಲ್ಲಿ ಮಹಿಳೆಯರ ಮರಣ ಪ್ರಮಾಣ ಪ್ರತಿ ಸಾವಿರ ಮಹಿಳೆಯರಲ್ಲಿ 145ರಷ್ಟಿದ್ದರೆ, ಪ್ರತಿ ಸಾವಿರ ಪುರುಷರಲ್ಲಿ 201 ಮಂದಿ ಸಾವನ್ನಪ್ಪಿದ್ದಾರೆ. ಪುರುಷರು ತಮ್ಮ ಸಾಮಾಜಿಕ ಸ್ಥಿತಿಗತಿಯಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ ಎಂದು ಡಾ. ತೌಸಿಫ್‌ ತಿಳಿಸಿದರು.

Leave A Reply

Your email address will not be published.