ಕಾಫೀ ಕುಡಿದು ಶಾಪಿಂಗ್ ಹೋದ್ರೆ ಖಾಲಿ ಆಗುತ್ತೆ ಅಂತೆ ನಿಮ್ಮ ಜೇಬು!, ಹೇಗೆ ಗೊತ್ತಾ!?

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕಂದ್ರೆ ಒಂದು ಕಪ್ ಕಾಫಿ ಕುಡಿದ್ರೇನೇ ಉಲ್ಲಾಸ ಅನ್ನೋರೆ ಹೆಚ್ಚು. ಆದ್ರೆ ಕಾಫಿ ಪ್ರಿಯರಿಗೆ ಒಂದು ಶಾಕಿಂಗ್ ಸುದ್ದಿ ಇಲ್ಲೊಂದಿದ್ದು, ಕಾಫೀ ಕುಡಿದು ನೀವು ಶಾಪಿಂಗ್ ಹೋದ್ರೆ ಖಾಲಿ ಆಗುತ್ತೆ ಅಂತೆ ನಿಮ್ಮ ಜೇಬು..

ಹೌದು. ಸೌತ್​ ಫ್ಲೋರಿಡಾದ ವಿಶ್ವವಿದ್ಯಾಲಯವೊಂದು ಆಸಕ್ತಿಕರ ಅಧ್ಯಯನವೊಂದನ್ನು ನಡೆಸಿದ್ದು, ಕಾಫಿಯಲ್ಲಿನ ಕೆಫೀನ್​ ಅಂಶವು ಶಾಪಿಂಗ್​ ಮಾಡುವ ವೇಳೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಅಂಗಡಿಗಳ ಮುಂದೆಯೇ ಕೆಫೆ ಸ್ಟಾಲ್​ ಆರಂಭಿಸಿ ಅಧ್ಯಯನ ಮಾಡಿದೆ. ಇದರ ಫಲಿತಾಂಶ ನಿಜಕ್ಕೂ ಆಶ್ಚರ್ಯ ಮತ್ತು ವಿಶೇಷ ದತ್ತಾಂಶಗಳನ್ನು ಪಡೆದುಕೊಂಡಿದೆ.

ನಿದ್ದೆ, ಆಯಾಸ ಹೋಗಲಾಡಿಸಲು ಕಾಫಿ, ಟೀ ಮೊರೆ ಹೋಗುತ್ತೇವೆ. ಆದರೆ, ಅದೇ ಕಾಫಿ ತಮ್ಮನ್ನು ಅನಿಯಂತ್ರಿತವಾಗಿ ಶಾಪಿಂಗ್​ ಮಾಡಿಸುತ್ತದೆ ಎಂಬುದನ್ನು ನಂಬಲು ಕಷ್ಟವೇ ಸರಿ. ಆದ್ರೆ, ಇದನ್ನು ಯುನಿವರ್ಸಿಟಿ ಆಫ್ ಸೌತ್ ಫ್ಲೋರಿಡಾ (USF) ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದ್ದು, ಫೀನ್ ಅಂಶವು ನೀವು ಏನು ಖರೀದಿಸುತ್ತೀರಿ ಮತ್ತು ಶಾಪಿಂಗ್ ಮಾಡುವಾಗ ನೀವು ಎಷ್ಟು ಖರ್ಚು ಮಾಡುತ್ತೀರಿ ಎಂಬುದರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿದಿದೆ.

ಸಂಶೋಧನಾ ತಂಡವು ಮೂರು ಹಂತದ ಪ್ರಯೋಗಗಳನ್ನು ನಡೆಸಿದೆ. ಅಧ್ಯಯನ ತಂಡವು ಅಂಗಡಿಗಳ ಮುಂದಿನ ಪ್ರವೇಶದ್ವಾರಗಳ ಬಳಿ ಕಾಫಿ ಡೇಗಳನ್ನು ಆರಂಭಿಸಿದೆ. ಈ ವೇಳೆ ಶಾಪಿಂಗ್​ಗೂ ಮುನ್ನ ಜನರು ಕಾಂಪ್ಲಿಮೆಂಟರಿ ಕೆಫೀನ್ ಆಗಿ ಕಾಫಿಯನ್ನು ಸೇವಿಸಿದ ಬಳಿಕ ಶಾಪರ್‌ಗಳು ಸುಮಾರು 50% ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಡಿಕಾಫ್ ಅಥವಾ ನೀರನ್ನು ಸೇವಿಸಿದ ಶಾಪರ್‌ಗಳಿಗಿಂತ ಸುಮಾರು 30% ಹೆಚ್ಚು ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಜರ್ನಲ್ ಆಫ್ ಮಾರ್ಕೆಟಿಂಗ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖವಾಗಿದೆ.

ಕೆಫೀನ್, ಶಕ್ತಿ ಉತ್ತೇಜಿಸಿ ಮೆದುಳಿನಲ್ಲಿ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮನಸ್ಸು ಮತ್ತು ದೇಹವನ್ನು ಪ್ರಚೋದಿಸುತ್ತದೆ. ಇದು ಹಠಾತ್ ಆಗಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಸ್ವಯಂ ನಿಯಂತ್ರಣವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಕೆಫೀನ್ ಸೇವನೆಯು ಹೆಚ್ಚಿನ ಸಂಖ್ಯೆಯ ವಸ್ತುಗಳನ್ನು ಖರೀದಿಸುವ ಮತ್ತು ಹೆಚ್ಚಿನ ಖರ್ಚುಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಯುಎಸ್‌ಎಫ್‌ನಲ್ಲಿ ಫ್ರಾಂಕ್ ಹಾರ್ವೆ ಎಂಡೋವ್ಡ್ ಪ್ರೊಫೆಸರ್ ಆಗಿರುವ ದಿಪಯನ್ ಬಿಸ್ವಾಸ್ ಹೇಳಿದರು.

ಫ್ರಾನ್ಸ್‌ನಲ್ಲಿನ ಚಿಲ್ಲರೆ ಮತ್ತು ಗೃಹೋಪಯೋಗಿ ವಸ್ತುಗಳ ಅಂಗಡಿಗಳ ಮುಂದೆಯೇ ಅಧ್ಯಯನ ನಡೆಸಿದ್ದು, ಈ ವೇಳೆ ಅಂಗಡಿಗಳನ್ನು ಪ್ರವೇಶಿಸಿದ 300 ಕ್ಕೂ ಹೆಚ್ಚು ಜನರಿಗೆ ಕಾಫಿಯನ್ನು ಒದಗಿಸಲಾಯಿತು. ಇದರಲ್ಲಿ ಅರ್ಧದಷ್ಟು ಕಾಫಿಯೊಂದಿಗೆ 100 ಮಿ.ಗ್ರಾಂ. ಕೆಫೀನ್ ಮತ್ತು ಇನ್ನು ಕೆಲವರಿಗೆ ಡಿಕಾಫ್ ಅಥವಾ ನೀರನ್ನು ನೀಡಲಾಗಿದೆ. ಕಾಫಿ ಮತ್ತು ನೀರು ಕುಡಿದವರು ಶಾಪಿಂಗ್​ ಮುಗಿಸಿ ಅಂಗಡಿಗಳಿಂದ ನಿರ್ಗಮಿಸಿದಾಗ ಸಂಶೋಧಕರೊಂದಿಗೆ ತಮ್ಮ ರಸೀದಿಗಳನ್ನು ಹಂಚಿಕೊಂಡಿದ್ದಾರೆ.

ಕಾಫಿ(ಕೆಫೀನ್) ಕುಡಿದ ವ್ಯಕ್ತಿಗಳು ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ವಸ್ತುಗಳನ್ನು ಖರೀದಿಸಿದ್ದಾರೆ. ನೀರನ್ನು ಕುಡಿದವರಿಗೆ ಹೋಲಿಸಿದರೆ ಹೆಚ್ಚು ಹಣವನ್ನು ವ್ಯಯ ಮಾಡಿದ್ದಾರೆ ಎಂಬುದನ್ನು ತಂಡವು ಪತ್ತೆ ಮಾಡಿದೆ. ಇದಲ್ಲದೇ, ಕೆಫೀನ್ ಅಂಶವು ಅವರು ಯಾವ ರೀತಿಯ ವಸ್ತುಗಳನ್ನು ಖರೀದಿಸಿದರು ಎಂಬುದರ ಮೇಲೂ ಪರಿಣಾಮ ಬೀರಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕೆಫೀನ್‌ಯುಕ್ತ ಕಾಫಿಯನ್ನು ಸೇವಿಸುವವರು ಇತರ ವ್ಯಾಪಾರಿಗಳಿಗಿಂತ ಹೆಚ್ಚು ಅನಗತ್ಯವಾದ ವಸ್ತುಗಳನ್ನು ಖರೀದಿಸಿದರು. ಉದಾಹರಣೆಗೆ ಪರಿಮಳಯುಕ್ತ ಮೇಣದಬತ್ತಿಗಳು ಮತ್ತು ಸುಗಂಧ ದ್ರವ್ಯಗಳನ್ನು ಖರೀದಿಸಿದ್ದರು.

ಅಲ್ಪ ಪ್ರಮಾಣದ ಕೆಫೀನ್ ಸೇವನೆಯಿಂದ ಧನಾತ್ಮಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದಾದರೂ, ಶಾಪಿಂಗ್ ಮಾಡುವಾಗ ಕಾಫಿ ಕುಡಿದರೆ, ಅನಪೇಕ್ಷಿತ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ನೀವು ವೆಚ್ಚವನ್ನು ನಿಯಂತ್ರಿಸಲು ಬಯಸುವವರಾದರೆ, ಶಾಪಿಂಗ್ ಮಾಡುವ ಮುನ್ನ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂಬುದು ಅಧ್ಯಯನದ ಸಲಹೆಯಾಗಿದೆ.

Leave A Reply

Your email address will not be published.