ಬರೀ 10 ರೂ. ನಾಣ್ಯಗಳನ್ನೇ ನೀಡಿ ಹೊಸ ಕಾರು ಖರೀದಿಸಿದ ವೈದ್ಯ !!

ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಈ ನಾಣ್ಯ ಸ್ವೀಕರಿಸುವುದನ್ನೇ ಹಲವರು ಬಿಟ್ಟಿದ್ದಾರೆ. ಅದೆಷ್ಟೋ ಮಂದಿ ಹತ್ತು ರೂಪಾಯಿ ನಾಣ್ಯವನ್ನು ಯಾವುದೇ ವ್ಯವಹಾರದಲ್ಲೂ ಉಪಯೋಗಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನತೆಯಲ್ಲಿ ಅರಿವು ಮೂಡಿಸಲು ಧರ್ಮಪುರಿಯ ವೈದ್ಯರೊಬ್ಬರು ವಿನೂತನವಾದ ಕ್ರಮ ಕೈಗೊಂಡಿದ್ದಾರೆ.

27 ವರ್ಷದ ಹೋಮಿಯೋಪತಿ ವೈದ್ಯ ಡಾ. ಎ ವೆಟ್ರಿವೇಲ್ ಎಂಬುವವರು ಅರವತ್ತು ಸಾವಿರ 10 ರೂಪಾಯಿ ನಾಣ್ಯಗಳನ್ನು ನೀಡಿ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ಜನತೆಯಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಶಾಲೆಯನ್ನೂ ನಡೆಸುತ್ತಿರುವ ಈ ವೈದ್ಯ ತಮ್ಮ ನಿರ್ಧಾರದ ಬಗ್ಗೆ ಮಾತನಾಡುತ್ತಾ, ” ಕಳೆದ ತಿಂಗಳು ನಾನು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಅವರು 10 ರೂಪಾಯಿ ನಾಣ್ಯ ಇಟ್ಟುಕೊಂಡು ಆಡುತ್ತಿದ್ದುದ್ದನ್ನು ಗಮನಿಸಿದೆ. ಹೀಗೇಕೆ ಆಡುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ 10 ರೂಪಾಯಿ ನಾಣ್ಯವನ್ನು ಧರ್ಮಪುರಿಯಲ್ಲಿ ಯಾವ ಅಂಗಡಿಗಳಲ್ಲೂ ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ನಾನು ಈ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿ ಕಳೆದ 30 ದಿನಗಳಿಂದ ಮನೆ ಮನೆಗಳಿಗೆ ತೆರಳಿ, ನಾಣ್ಯ ಸಂಗ್ರಹಿಸಿ ಅದನ್ನು 10 ರೂಪಾಯಿ ನೋಟುಗಳೊಂದಿಗೆ ಬದಲಾಯಿಸುತ್ತಿದ್ದೆ. ಬ್ಯಾಂಕ್ ಗಳಿಂದಲೂ ಸಹ ನಾನು ನಾಣ್ಯಗಳನ್ನು ಸಂಗ್ರಹಿಸಿದ್ದೆ. ಜನರು ನಾಣ್ಯಗಳನ್ನು ನೋಟುಗಳೊಂದಿಗೆ ಬದಲಿಸಲು ಅತ್ಯಂತ ಸಂತಸದಿಂದ ಮುಂದಾಗಿದ್ದರು. 60,000 ನಾಣ್ಯಗಳನ್ನು ಸಂಗ್ರಹಿಸಿ ಶೋ ರೂಮ್ ಗೆ ಅದೇ ನಾಣ್ಯಗಳನ್ನು ನೀಡಿ, ಕಾರನ್ನೂ ಖರೀದಿಸಿದೆ” ಎನ್ನುತ್ತಾರೆ ವೈದ್ಯ ಡಾ. ಎ ವೆಟ್ರಿವೇಲ್.

ಉಮಾಶಂಕರ್ ಎಂಬ ವರ್ತಕ ಮಾತನಾಡುತ್ತಾ, ಹಲವು ಡೀಲರ್ ಗಳ ಬಳಿ 10 ರೂಪಾಯಿ ನಾಣ್ಯವಿದೆ. ಏಕೆಂದರೆ ಗ್ರಾಹಕರು ಅದನ್ನು ಸ್ವೀಕರಿಸುವುದಿಲ್ಲ. ಬ್ಯಾಂಕ್ ಗಳೂ ಇದಕ್ಕೇನು ಹೊರತಲ್ಲ. ನನ್ನ ಬಳಿ 10 ರೂಪಾಯಿಗಳ 250 ನಾಣ್ಯಗಳಿವೆ ಎಂದು ಹೇಳಿದ್ದಾರೆ. ಧರ್ಮಪುರಿಯ ಮುಂಚೂಣಿಯಲ್ಲಿರುವ ಬ್ಯಾಂಕ್ ಮ್ಯಾನೇಜರ್, ಈ ಬಗ್ಗೆ ಮಾತನಾಡಿದ್ದು, ಆರ್ ಬಿಐ 10 ರೂಪಾಯಿ ನಾಣ್ಯಗಳು ಸಿಂಧುತ್ವ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ. ಆದರೂ ಸಾರ್ವಜನಿಕರು 10 ರೂ ನಾಣ್ಯವನ್ನು ವ್ಯವಹಾರದಲ್ಲಿ ಬಳಸಿಕೊಳ್ಳಲು ಹಿಂಜರಿಯುತ್ತಾರೆ.

ಇನ್ನಾದರೂ ಸಾರ್ವಜನಿಕರು 10 ರೂ. ನಾಣ್ಯವನ್ನು ತಮ್ಮ ವ್ಯವಹಾರದಲ್ಲಿ ಬಳಸಿಕೊಳ್ಳುವುದು ಉತ್ತಮ. 10 ರೂ. ನಾಣ್ಯವನ್ನು ಪಡೆದುಕೊಳ್ಳುವುದು ಅಥವಾ ನೀಡುವುದು ಯಾವುದೇ ರೀತಿಯಲ್ಲಿ ಅಪರಾಧವಲ್ಲ. ಹಾಗಾಗಿ ಇನ್ನು ಮುಂದೆ ಹತ್ತು ರೂ. ನಾಣ್ಯವನ್ನು ತಮ್ಮ ದೈನಂದಿನ ವ್ಯವಹಾರದಲ್ಲಿ ಬಳಸಿಕೊಳ್ಳಿ.

Leave A Reply

Your email address will not be published.