ಗರ್ಭಿಣಿ ಮಹಿಳೆಯರು ಕೆಲಸಕ್ಕೆ ಅನರ್ಹ : ಇಂಡಿಯನ್ ಬ್ಯಾಂಕ್ ಹೊಸ ನಿಯಮ

ಇಂಡಿಯನ್ ಬ್ಯಾಂಕ್ ನೇಮಕಾತಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಇಂಡಿಯನ್ ಬ್ಯಾಂಕ್ ತನ್ನ ನೇಮಕಾತಿ ನಿಯಮದಲ್ಲಿ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹ ಎಂದು ಹೇಳಿದೆ. ಈ ನಿಯಮದಿಂದಾಗಿ ದೆಹಲಿ ಮಹಿಳಾ ಆಯೋಗ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲದೇ ಈ ನಿಯಮವೇ ಅಕ್ರಮ ಎಂದಿದೆ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥ ಸ್ವಾತಿ ಮಲಿವಾಲ್, ಇಂಡಿಯನ್ ಬ್ಯಾಂಕ್‌ಗೆ ನೋಟಿಸ್ ನೀಡಿದ್ದಾರೆ. ಈ ನಿಯಮ ಅಕ್ರಮವಾಗಿದ್ದು, ತಕ್ಷಣವೇ ನೇಮಕಾತಿ ನಿಯಮ ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ಇಂಡಿಯನ್ ಬ್ಯಾಂಕ್ ತನ್ನ ನೇಮಕಾತಿ ನಿಯಮದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಕೆಲಸಕ್ಕೆ ಅನರ್ಹರು ಎಂದಿದೆ. ಇದೇ ವಿವಾದ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಇಂಡಿಯನ್ ಬ್ಯಾಂಕ್ ನಿಯಮ ಇಷ್ಟಕ್ಕೆ ಮುಗಿಯುವುದಿಲ್ಲ. ಹೆರಿಗೆಯ ಬಳಿಕ ಕೆಲಸಕ್ಕೆ ಹಾಜರಾಗಲು ತಾನು ಕೆಲಸ ಮಾಡಲು ಆರೋಗ್ಯವಾಗಿದ್ದೇನೆ, ಹಾಗೂ ಫಿಟ್ ಎಂದು ವೈದ್ಯರ ಪ್ರಮಾಣ ಪತ್ರವನ್ನು ಸಲ್ಲಿಸಿ ಕೆಲಸಕ್ಕೆ ಸೇರಿಸಿಕೊಳ್ಳಬಹುದು ಎಂದಿದೆ.

ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮ ಸಾಮಾಜಿಕ ಭದ್ರತೆ ಸಂಹಿತೆ 2020ರ ಅಡಿಯಲ್ಲಿ ಮಹಿಳೆಗೆ ಒದಗಿಸಲಾಗಿರುವ ಹೆರಿಗೆ ಪ್ರಯೋಜನಕ್ಕೆ ವಿರುದ್ಧವಾಗಿದೆ. ಇಷ್ಟೇ ಅಲ್ಲ ಈ ನಿಯಮ ಕಾನೂನು ಬಾಹಿರವಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಹೇಳಿದೆ. ತಕ್ಷಣವೇ ಈ ನಿಯಮವನ್ನು ಹಿಂಪಡೆಯಬೇಕು ಎಂದು ದೆಹಲಿ ಮಹಿಳಾ ಆಯೋಗ ನೋಟಿಸ್‌ನಲ್ಲಿ ಸೂಚಿಸಿದೆ. ಆರ್‌ಬಿಐ ಈ ಬ್ಯಾಂಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾತಿ ಮಲಿವಾಲ್ ಆಗ್ರಹಿಸಿದ್ದಾರೆ.

ಇಂಡಿಯನ್ ಬ್ಯಾಂಕ್‌ನ ಈ ಕ್ರಮವು ಸಾಮಾಜಿಕ ಭದ್ರತೆ ಸಂಹಿತೆ, 2020 ಅಡಿಯಲ್ಲಿ ಒದಗಿಸಲಾದ ಹೆರಿಗೆ ಪ್ರಯೋಜನಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತಾರತಮ್ಯ ಮತ್ತು ಕಾನೂನುಬಾಹಿರ ಸೂಚನೆಯಲ್ಲಿ ನೋಟಿಸ್ ನೀಡಲಾಗಿದೆ.

ಜನವರಿ ತಿಂಗಳಲ್ಲಿ ಎಸ್‌ಬಿಐ ಬ್ಯಾಂಕ್ ಇದೇ ರೀತಿಯ ನೇಮಕಾತಿ ನಿಯಮ ತಂದಿತ್ತು. ಮೂರು ಅಥವಾ ಅದಕ್ಕಿಂತ ಹೆಚ್ಚಿನ ತಿಂಗಳ ಗರ್ಭಿಣಿ ಕೆಲಸಕ್ಕೆ ಅನ್‌ಫಿಟ್. ಹೆರಿಗೆಯಾದ 4 ತಿಂಗಳ ಬಳಿಕ ಮಾತ್ರವೇ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು. ಆದರೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೇಮಕಾತಿ ನಿಯಮವನ್ನು ಹಿಂಪಡೆದಿತ್ತು. SBI ರೀತಿಯಲ್ಲೇ ಇಂಡಿಯನ್ ಬ್ಯಾಂಕ್ ಕೂಡ ಹೊಸ ನಿಯಮ ತಂದಿದೆ. ಆದರೆ ಆರಂಭಿಕ ಹಂತದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಈ ನೇಮಕಾತಿ ನಿಯಮವನ್ನು ಇಂಡಿಯನ್ ಬ್ಯಾಂಕ್ ಹಿಂಪಡೆಯುವ ಸಾಧ್ಯತೆಗಳಿವೆ.

Leave A Reply

Your email address will not be published.