‘ಅಗ್ನಿವೀರ್’ ನೇಮಕಾತಿಗೆ ನೋಟಿಫಿಕೇಶನ್ ಪ್ರಕಟ !! | ಜುಲೈ ತಿಂಗಳಿನಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭ

ದೇಶದಲ್ಲೆಡೆ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಯೋಜನೆಯನ್ನು ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಇದೀಗ ಅಗ್ನಿವೀರ್‌ ನೇಮಕಾತಿಗೆ ನೋಟಿಫಿಕೇಶನ್‌ ಪ್ರಕಟಿಸಿದೆ.

ಸೋಮವಾರ https://joinindianarmy.nic.in/ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್‌ ಅಪ್ಲೋಡ್‌ ಮಾಡಿದೆ. ಮುಂದಿನ ತಿಂಗಳಿನಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಸೇನಾ ನೇಮಕಾತಿ ರ‍್ಯಾಲಿ ಆಗಸ್ಟ್‌ ಮಧ್ಯದಲ್ಲಿ ನಡೆಯಲಿದೆ.

ಜನರಲ್‌ ಡ್ಯೂಟಿ, ಟೆಕ್‌, ಕ್ಲರ್ಕ್‌, ಸ್ಟೋರ್‌ ಕೀಪರ್‌ ಟೆಕ್ನಿಕಲ್‌, ಅಗ್ನಿವೀರ್‌ ಟ್ರೇಡ್ಸ್‌ಮನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಗ್ನಿವೀರ್‌ ಟ್ರೇಡ್ಸ್‌ಮನ್‌ ಹುದ್ದೆಗೆ 8ನೇ ತರಗತಿ ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಕನಿಷ್ಠ 17 ವರ್ಷ 6 ತಿಂಗಳು ಗರಿಷ್ಠ 23 ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಯ ವೇಳೆ ಎನ್‌ಸಿಸಿ ಸಿ ಸರ್ಟಿಫಿಕೇಟ್‌ ಇದ್ದವರಿಗೆ 15 ಬೋನಸ್‌ ಅಂಕ ನೀಡಲಾಗುತ್ತದೆ.

ಸಾಂಸ್ಥಿಕ ಹಿತಾಸಕ್ತಿಯಲ್ಲಿ ಯಾವುದೇ ಕರ್ತವ್ಯವನ್ನು ನಿಯೋಜಿಸಲು ‘ಅಗ್ನಿವೀರರು’ ಹೊಣೆಗಾರರಾಗಿರುತ್ತಾರೆ. ಈ ಯೋಜನೆಯಡಿ ದಾಖಲಾದ ಸಿಬ್ಬಂದಿ ಆದೇಶಗಳ ಪ್ರಕಾರ ದೈಹಿಕ/ಲಿಖಿತ/ಕ್ಷೇತ್ರ ಪರೀಕ್ಷೆಗಳೊಂದಿಗೆ ನಿಯತಕಾಲಿಕವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಹೀಗೆ ಪ್ರದರ್ಶಿಸಿದ ಕಾರ್ಯಕ್ಷಮತೆಯನ್ನು ರೆಗ್ಯುಲರ್ ಕೇಡರ್‌ಗೆ ದಾಖಲಾತಿಗಾಗಿ ಪರಿಗಣಿಸಲಾಗುತ್ತದೆ. ಅಗ್ನಿವೀರರನ್ನು ಯಾವುದೇ ರೆಜಿಮೆಂಟ್/ಯುನಿಟ್‌ಗೆ ಪೋಸ್ಟ್ ಮಾಡಬಹುದು ಮತ್ತು ಸಾಂಸ್ಥಿಕ ಆಸಕ್ತಿ ಪ್ರಕಾರ ವರ್ಗಾವಣೆ ಮಾಡಬಹುದು.

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಯ ಸೇವೆಗಾಗಿ ಸೇನಾ ಕಾಯಿದೆ 1950 ರ ಅಡಿಯಲ್ಲಿ ದಾಖಲಾಗುತ್ತಾರೆ. ಅಗ್ನಿವೀರರು ಭೂಸೇನೆ, ನೌಕಾಪಡೆ ಅಥವಾ ವಾಯುಸೇನೆ ಮೂಲಕ ಆದೇಶಿಸಿದಲ್ಲೆಲ್ಲಾ ಹೋಗುವುದು ಕಡ್ಡಾಯ. ಅಗ್ನಿವೀರರು ಯಾವುದೇ ರೀತಿಯ ಪಿಂಚಣಿ ಅಥವಾ ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ.

ಮೊದಲ ವರ್ಷ 30 ಸಾವಿರ ರೂ., ಎರಡನೇ ವರ್ಷ 33 ಸಾವಿರ ರೂ., ಮೂರನೇ ವರ್ಷ 36,500 ರೂ., ನಾಲ್ಕನೇಯ ವರ್ಷ 40 ಸಾವಿರ ರೂ. ಸಿಗಲಿದೆ. ಅಷ್ಟೇ ಅಲ್ಲದೇ ಪ್ರತಿ ವರ್ಷ ನಿಗದಿ ಪಡಿಸಿದ ಭತ್ಯೆ ಸಿಗಲಿದೆ.
ಅದಲ್ಲದೆ, ಅಗ್ನಿ ವೀರರಿಗೆ 48 ಲಕ್ಷ ರೂ. ಮೌಲ್ಯದ ವಿಮೆ ಸಿಗಲಿದೆ. ಆದರೆ ಇವರು ಆರ್ಮಿ ಗ್ರೂಪ್‌ ಇನ್ಶೂರೆನ್ಸ್‌ ಫಂಡ್‌(ಎಜಿಐಎಫ್‌) ಯೋಜನೆಯ ಭಾಗವಾಗಿರುವುದಿಲ್ಲ. ಅಗ್ನಿವೀರರಾಗಿ ಸೇನೆಗೆ ಸೇರಲು ಬಯಸುವವರು ಆನ್‌ಲೈನ್‌ ಮೂಲಕ ನೋಂದಣಿ ಮಾಡಬೇಕಾಗುತ್ತದೆ.

ನೋಟಿಫಿಕೇಶನ್‌ ಪಿಡಿಎಫ್‌ ಫೈಲ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ: https://joinindianarmy.nic.in/

Leave A Reply

Your email address will not be published.