ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಅಪ್ಪ-ಮಗ, ತಂದೆಗೆ ಬಂದ ಅಂಕ ಎಷ್ಟು ಗೊತ್ತಾ?

ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರವಷ್ಟೇ ಪ್ರಕಟವಾಗಿದೆ ಎಲ್ಲರಿಗೂ ಗೊತ್ತಿದೆ. ಇಲ್ಲೊಂದು ಆಶ್ಚರ್ಯಕರ ಸಂಗತಿ ನಡೆದಿದೆ. ಹೌದು ಇಪ್ಪತ್ತು ವರ್ಷಗಳ ಹಿಂದೆ ಪರೀಕ್ಷೆಯಲ್ಲಿ ಫೇಲಾದ ತಂದೆಯೊಬ್ಬರು ಮಗನೊಂದಿಗೆ ಅಭ್ಯಾಸ ಪರೀಕ್ಷೆ ಬರೆದಿರುವುದಲ್ಲದೇ ಪುತ್ರನಿಗಿಂತ ಹೆಚ್ಚು ಅಂಕ ಪಡೆದು ಪಾಸಾಗಿದ್ದಾರೆ.

ಕೊಪ್ಪಳ ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಹೇಂದ್ರಕರ್ ಎಂಬುವರು 1999ರಲ್ಲಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಶಿಕ್ಷಣ ವಿಭಾಗದಲ್ಲಿ ದ್ವೀತಿಯ ಪಿಯುಸಿ ಮುಗಿಸಿದ್ದಾರೆ. ಎಲ್ಲ ವಿಷಯಗಳಲ್ಲಿ ಪಾಸ್ ಆದರೂ, ಇಂಗ್ಲೀಷ್‌ನಲ್ಲಿ ಅನುತ್ತೀರ್ಣಗೊಂಡಿದ್ದರು.

2000ರಲ್ಲಿ ಮರು ಪರೀಕ್ಷೆ ಕಟ್ಟಿದರೂ ತೇರ್ಗಡೆಯಾಗಿರಲಿಲ್ಲ. ಅಲ್ಲಿಗೆ ಪ್ರಯತ್ನ ಕೈ ಬಿಟ್ಟಿದ್ದರು. ಈ ವರ್ಷ ಇವರ ಪುತ್ರ ವಿನಾಯಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವನಿದ್ದ. ಹಾಗಾಗಿ ಮಗನ ಜೊತೆ ಸೇರಿ ಅಭ್ಯಾಸ ಮಾಡಿ, ಮಗನೊಂದಿಗೆ ಪರೀಕ್ಷೆ ಕಟ್ಟಿ ಪ್ರಾಣೇಶ್ ಇಂಗ್ಲಿಷ್ ನಲ್ಲಿ 40 ಅಂಕಗಳಿಸಿ ಪಾಸಾಗಿದ್ದಾರೆ. ಇವರು ಒಟ್ಟಾರೆ 344 ಅಂಕ ಪಡೆದಿದ್ದರೆ, ಇವರ ಮಗ 333 ಅಂಕ ಪಡೆದಿದ್ದಾನೆ. ಮಗನಿಗಿಂತ 10 ಹೆಚ್ಚು ಅಂಕಗಳನ್ನು ಪಡೆದಿದ್ದು, ಓದಿಗೆ ವಯಸ್ಸಿನ ಹಂಗಿಲ್ಲವೆಂದು ಸಾಬೀತು ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಾಣೇಶ ಮಹೇಂದ್ರ, ಅಂಕಗಳು ಜೀವನದ ಮಾನದಂಡವಲ್ಲ. ಮೊದಲು ನಾನು ಫೇಲಾಗುತ್ತೇನೆಂಬ ಭಾವ ಇತ್ತು. ಆದರೆ ಅದನ್ನೆಲ್ಲಾ ಬದಿಗಿಟ್ಟು ಜೀವನ ಕಟ್ಟಿಕೊಂಡಿದ್ದೇವೆ. ನನ್ನ ಮಗ ದ್ವಿತೀಯ ಪಿಯುಸಿ ಇದ್ದ ಕಾರಣ ಆತನೊಂದಿಗೆ ಪರೀಕ್ಷೆ ಕಟ್ಟಿ ಈಗ ಉತ್ತೀರ್ಣನಾಗಿರುವೆ. ಯಾವ ಮಕ್ಕಳು ನಪಾಸಾದವೆಂದು ಬೇಸರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಬುದ್ಧಿ ಮಾತು ಕೂಡಾ ಹೇಳಿದ್ದಾರೆ.

Leave A Reply

Your email address will not be published.