ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾದ ಕುಡ್ಲದ ‘ಚಾರ್ಲಿ’

ಕನ್ನಡ ಸಿನಿಮಾ ರಂಗದಲ್ಲಿ ಎಲ್ಲೆಡೆ, ಎಲ್ಲರ ಮನದಲ್ಲಿ ಗುಡುಗುತ್ತಿರುವ ಪದವೇ ‘ಚಾರ್ಲಿ’. ಹೌದು. ಮನುಷ್ಯ ಮತ್ತು ನಾಯಿಯ ಒಡನಾಟ ಅದೆಷ್ಟು ಅದ್ಭುತ ಎಂಬುದನ್ನು ಸಾಧಿಸಿ ತೋರಿಸಿದೆ ಈ ಸಿನಿಮಾ. ಒಂದೇ ದಿನದಲ್ಲಿ ಸೂಪರ್ ಹಿಟ್ ಆದ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾ ಎಲ್ಲಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯಾಗಿ ಉಳಿಯೋದ್ರಲ್ಲಿ ಸಂಶಯವೇ ಇಲ್ಲ.

ಅಂತೂ ಸಿನಿಮಾದಲ್ಲಿ ನಾಯಿಯ ನಟನೆಗೆ ಜನರು ಫಿದಾ ಆಗಿದ್ದು, ನಾಯಿಗಳ ಮೇಲಿನ ಜನರ ಪ್ರೀತಿ ಇಮ್ಮಡಿಯಾಗುವುದರ ಜೊತೆಗೆ ಸೋಶಿಯಲ್ ಮೀಡಿಯಾ ಫುಲ್ ಚಾರ್ಲಿದ್ದೇ ಹವವಾಗಿದೆ. ಅಷ್ಟೇ ಯಾಕೆ ಈ ಸಿನಿಮಾದಿಂದ ಎಲ್ಲಾ ನಾಯಿಗೂ ‘ಚಾರ್ಲಿ’ ಎಂದೇ ನಾಮಕರಣ ಮಾಡುತ್ತಿದ್ದಾರೆ.

ಹೌದು. ಇದೀಗ ಮಂಗಳೂರಿನಲ್ಲಿರುವ 3 ತಿಂಗಳ ‘ಚಾರ್ಲಿ’ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಾರ್ಲಿ ಸಿನಿಮಾದಿಂದ ಸ್ಪೂರ್ತಿ ಪಡೆದು, ಮಂಗಳೂರು ನಗರ ಪೊಲೀಸ್ ಆಯಕ್ತ ಎನ್. ಶಶಿಕುಮಾರ್ ಕೆಲವು ದಿನಗಳ ಹಿಂದೆ ಪೊಲೀಸ್ ಶ್ವಾನದಳದ ಮೂರು ತಿಂಗಳ ನಾಯಿ ಮರಿಗೆ ಚಾರ್ಲಿ ಎಂದು ನಾಮಕರಣ ಮಾಡಿದ್ದರು. ಇದೀಗ ಈ ಕುಡ್ಲದ ‘ಚಾರ್ಲಿ’ಯ ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಚಾರ್ಲಿ 777’ ಚಿತ್ರದಲ್ಲಿಯೂ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿ ನಟನೆ ಮಾಡಿದೆ. ಮಂಗಳೂರು ಪೊಲೀಸರು ಸಹ ಇದೇ ತಳಿಯ ನಾಯಿ ಮರಿಗೆ ‘ಚಾರ್ಲಿ’ ಎಂದು ನಾಮಕರಣ ಮಾಡಿದ್ದಾರೆ. ಈ ಲ್ಯಾಬ್ರೊಡರ್ ರಿಟ್ರಿವರ್ ತಳಿಯ ನಾಯಿ ಬಂಟ್ವಾಳದಲ್ಲಿ 2022 ಮಾರ್ಚ್ 16ರಂದು ಹುಟ್ಟಿದ್ದು, ಈ ಶ್ವಾನವನ್ನು ಪೊಲೀಸ್ ಇಲಾಖೆಗಾಗಿ 20,000 ರೂ. ನೀಡಿ ಖರೀದಿ ಮಾಡಲಾಗಿದೆ.

‘ಚಾರ್ಲಿ’ ತರಬೇತಿಗಾಗಿ ಬೆಂಗಳೂರು ನಗರಕ್ಕೆ ತೆರಳಲಿದೆ. ಬೆಂಗಳೂರು ಸೌತ್ ಸಿಆರ್‌ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ‘ಚಾರ್ಲಿ’ ಬಾಂಬ್ ಪತ್ತೆ ಮಾಡಲು ಮಂಗಳೂರು ಪೊಲೀಸ್ ಇಲಾಖೆಯ ಶ್ವಾನದಳ ಸೇರಲಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಮಂಗಳೂರು ಶ್ವಾನದಳದಲ್ಲಿ 5ಕ್ಕೂ ಹೆಚ್ಚು ಶ್ವಾನಗಳಿವೆ. ಮೂರು ತಿಂಗಳ ಹಿಂದೆ ಹುಟ್ಟಿದ ಹೆಣ್ಣು ಶ್ವಾನವನ್ನು ಈಗ ಇಲಾಖೆಗೆ ಸೇರಿಸಿದ್ದೇವೆ‌” ಎಂದು ಹೇಳಿದ್ದಾರೆ.

Leave A Reply

Your email address will not be published.