ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸದಿದ್ದಲ್ಲಿ ಮತ್ತೆ ಹೋರಾಟ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಮಂಗಳೂರು: ಸುರತ್ಕಲ್‌ನ ತಾತ್ಕಾಲಿಕ ಟೋಲ್‌ಗೇಟ್ ನ್ನು 90 ದಿನಗಳಲ್ಲಿ ತೆರವುಗೊಳಿಸುವುದಾಗಿ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಜೂ.22ಕ್ಕೆ 90 ದಿನವಾಗಲಿದೆ. ನಿಗದಿತ ಕಾಲಮಿತಿಯೊಳಗೆ ಟೋಲ್‌ಗೇಟ್ ತೆರವುಗೊಳಿಸಬೇಕು, ಇಲ್ಲದಿದ್ದರೆ ಮತ್ತೆ ಹೋರಾಟ ತೀವ್ರಗೊಳಿಸುವುದಾಗಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.

ಟೋಲ್‌ಗೇಟ್ ವಿರುದ್ಧ ಹೋರಾಟ ಮಾಡಿದಾಗ ಸಂಸದರು ತೆರವುಗೊಳಿಸುವ ಭರವಸೆ ನೀಡುತ್ತಾ ಬಂದರೂ,ಯಾವುದನ್ನು ಸರಿ ಮಾಡಿಲ್ಲ.ಹೊಸದಿಲ್ಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸುರತ್ಕಲ್ ಟೋಲ್‌ಗೇಟ್‌ನ್ನು ನವಮಂಗಳೂರು ಬಂದರಿನ ಒಳಭಾಗಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೂ ಮಾರ್ಚ್ 22ರಂದು ಹೆಜಮಾಡಿ ಟೋಲ್‌ಗೇಟ್‌ನಿಂದ ಸುರತ್ಕಲ್ ಟೋಲ್‌ಗೇಟ್ ವರೆಗೆ ಪಾದಯಾತ್ರೆ ಮಾಡಲಾಯಿತು.

60 ಕಿ.ಮೀ. ಒಳಗೆ ಇರುವ ಎಲ್ಲ ಟೋಲ್‌ಗೇಟ್ ಬಂದ್ ಮಾಡುವ ಬಗ್ಗೆ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದರು. ನಂತರ ಟೋಲ್‌ಗೇಟ್ ವಿರುದ್ಧದ ಹೋರಾಟ ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು ಎಂದರು.

ಈಗ ಗಡುವು ಸಮೀಪಿಸುತ್ತಾ ಬಂದರೂ ಟೋಲ್‌ಗೇಟ್ ರದ್ದುಗೊಳಿಸುವ ಯಾವುದೇ ಸೂಚನೆ ಕಾಣುತ್ತಿಲ್ಲ. ಕೂಡಲೇ ಅನಧಿಕೃತ ಟೋಲ್‌ಗೇಟ್ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವೇ ಟೋಲ್‌ಗೇಟ್ ತೆರವು ಮಾಡುವುದಿಲ್ಲ ಎಂದು ಹೇಳಲಿ, ಮುಂದಿನ ಕಾನೂನಾತ್ಮಕ ಹೋರಾಟವನ್ನೂ ನಾವೇ ಕೈಗೆತ್ತಿಕೊಳ್ಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್
ಪುರುಷೋತ್ತಮ ಚಿತ್ರಾಪುರ, ವಕೀಲ ದಿನೇಶ್ ಹೆಗ್ಡೆ
ಉಳೆಪಾಡಿ, ದಲಿತ ಮುಖಂಡ ದೇವದಾಸ್,
ಮುಖಂಡರಾದ ರಾಘವೇಂದ್ರ ರಾವ್, ದಿನೇಶ್
ಕುಂಪಲ, ಬಿ.ಕೆ.ಇಮ್ತಿಯಾಜ್, ಪ್ರತಿಭಾ ಕುಳಾಯಿ, ಮೂಸಬ್ಬ ಪಕ್ಷಿಕೆರೆ, ರಘು ಎಕ್ಕಾರು, ಟಿ.ಎನ್ ರಮೇಶ್, ಶ್ರೀನಾಥ್ ಕುಲಾಲ್ ಇದ್ದರು.

Leave A Reply

Your email address will not be published.