ದೇಶದ ಸರ್ಕಾರಿ ನೌಕರರು ಈ ಕ್ಲೌಡ್ ಸೇವೆಗಳನ್ನು ಬಳಸದಂತೆ ಸರ್ಕಾರದಿಂದ ಆದೇಶ!!

ದೇಶದ ಸರ್ಕಾರಿ ನೌಕರರು ಯಾವುದೇ ಸರ್ಕಾರೇತರ ಕ್ಲೌಡ್ ಸೇವೆಯಲ್ಲಿ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಬೇಡಿ ಅಥವಾ ಉಳಿಸಬೇಡಿ ಎಂದು ಸರ್ಕಾರಿ ಉದ್ಯೋಗಿಗಳಿಗೆ ಸೈಬರ್ ಭದ್ರತಾ ಮಾರ್ಗಸೂಚಿಗಳಲ್ಲಿ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ.

ಮಾಹಿತಿ ಸೋರಿಕೆ ಮತ್ತು ಸೈಬರ್ ಅಟ್ಯಾಕ್ ನಂತಹ ಬೆದರಿಕೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ, ಗೂಗಲ್ ಡ್ರೈವ್, ಡ್ರಾಪ್‌ಬಾಕ್ಸ್, NordVPN, ExpressVPN ಮತ್ತು ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಸೇವೆಗಳನ್ನು ಒಳಗೊಂಡಂತೆ ಯಾವುದೇ ಮೂರನೇ ವ್ಯಕ್ತಿಯ ಅಥವಾ ಸರ್ಕಾರೇತರ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸದಂತೆ ಸರ್ಕಾರಿ ನೌಕರರನ್ನು ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಅಂಗೀಕರಿಸಿದ ಈ ಹೊಸ ಆದೇಶವನ್ನು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ರವಾನಿಸಲಾಗಿದ್ದು, 10-ಪುಟದ ಈ ಡಾಕ್ಯುಮೆಂಟ್‌ನಲ್ಲಿ ಜನಪ್ರಿಯ ಕ್ಲೌಡ್ ಸೇವೆಗಳನ್ನು ಬಳಸದಂತೆ ನೌಕರರನ್ನು ನಿರ್ಬಂಧಿಸುವುದರ ಜೊತೆಗೆ, NordVPN, ExpressVPN, Tor ಮತ್ತು ಪ್ರಾಕ್ಸಿಗಳು ಸೇರಿದಂತೆ ಯಾವುದೇ ಮೂರನೇ ವ್ಯಕ್ತಿಯ ಅನಾಮಧೇಯ ಸೇವೆಗಳು ಮತ್ತು VPN ಗಳನ್ನು ಬಳಸದಂತೆ ಸರ್ಕಾರವು ತನ್ನ ನಿರ್ದೇಶನದ ಮೂಲಕ ನೌಕರರಿಗೆ ಸೂಚನೆ ನೀಡಿದೆ.

ಇನ್ನು ಸರ್ಕಾರಿ ನೌಕರರು ಯಾವುದೇ ಅಧಿಕೃತ ಸಂವಹನಕ್ಕಾಗಿ ಬಾಹ್ಯ ಇಮೇಲ್ ಸೇವೆಗಳನ್ನು ಸಹ ಬಳಸದಂತೆ ಹಾಗೂ ಅನಧಿಕೃತ ಮೂರನೇ ವ್ಯಕ್ತಿಯ ವೀಡಿಯೊ ಕಾನ್ಫರೆನ್ಸಿಂಗ್ ಅಥವಾ ಸಹಯೋಗ ಸಾಧನಗಳನ್ನು ಬಳಸಿಕೊಂಡು ಸೂಕ್ಷ್ಮ ಆಂತರಿಕ ಸಭೆಗಳು ಮತ್ತು ಚರ್ಚೆಗಳನ್ನು ನಡೆಸದಂತೆ ಸಹ ಸರ್ಕಾರ ನಿರ್ದೇಶಿಸಿದೆ.

ಆಂತರಿಕ ಸರ್ಕಾರಿ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಕ್ಯಾಮ್ ಸ್ಕ್ಯಾನ್ನರ್ ಸೇರಿದಂತೆ ಯಾವುದೇ ಬಾಹ್ಯ ಮೊಬೈಲ್ ಅಪ್ಲಿಕೇಶನ್ ಆಧಾರಿತ ಸ್ಕ್ಯಾನರ್ ಸೇವೆಗಳನ್ನು ಬಳಸದಂತೆ ಸರ್ಕಾರಿ ಕಾರ್ಯಪಡೆಗೆ ನಿರ್ದೇಶನವನ್ನು ನೀಡಿದೆ. ಇನ್ನು ದೇಶದಲ್ಲಿ ಚೀನಾ ಆಧಾರಿತ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸುವ ಆರಂಭಿಕ ಕ್ರಮದ ಭಾಗವಾಗಿ ಸರ್ಕಾರವು 2020 ರಲ್ಲಿ CamScanner ಅನ್ನು ನಿಷೇಧಿಸಿತು. ಆದಾಗ್ಯೂ, ಕೆಲವು ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಲು ಅಪ್ಲಿಕೇಶನ್ ಅನ್ನು ಬಳಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದೆ.

ಇಷ್ಟೇ ಅಲ್ಲದೇ, ಸರ್ಕಾರದ ಆದೇಶವು ಕೆಲವು ಅಪ್ಲಿಕೇಶನ್‌ಗಳ ಬಳಕೆಯನ್ನು ನಿರ್ಬಂಧಿಸುವುದರ ಜೊತೆಗೆ, ಉದ್ಯೋಗಿಗಳಿಗೆ ತಮ್ಮ ಫೋನ್‌ಗಳನ್ನು ಜೈಲ್ ಬ್ರೇಕ್ ಅಥವಾ ರೂಟ್ ಮಾಡದಂತೆ ಹೇಳಿದೆ. ತಾತ್ಕಾಲಿಕ, ಗುತ್ತಿಗೆ / ಹೊರಗುತ್ತಿಗೆ ನೌಕರರು ಒಳಗೊಂಡಂತೆ ಎಲ್ಲಾ ಸರ್ಕಾರಿ ನೌಕರರು ಈ ದಾಖಲೆಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave A Reply

Your email address will not be published.