ಹಿಜಾಬ್ ಧರಿಸದಿದ್ದರೆ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣುತ್ತಾರಂತೆ !!-ಪೋಸ್ಟರ್ ವೈರಲ್

ಇಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲ. ಪ್ರತಿದಿನ ಶೋಷಣೆ ನಡೆಯುತ್ತಲೇ ಇದೆ. ಹೌದು. ಅಫ್ಘಾನಿಸ್ತಾನದಲ್ಲಿ ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಸ್ಲಾಮಿಕ್ ಹಿಜಾಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಾಲಿಬಾನ್‍ನ ಧಾರ್ಮಿಕ ಪೊಲೀಸರು ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ, ಅಫ್ಘಾನ್ ಮಹಿಳೆಯರ ಮೇಲೆ ತಾಲಿಬಾನ್ ಕಠಿಣ ನಿರ್ಬಂಧಗಳನ್ನು ಹೇರಿದೆ. ಮೇ ತಿಂಗಳಲ್ಲಿ ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡ್ಜಾದಾ, ಮಹಿಳೆಯರು ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಮನೆಯಿಂದ ಹೊರಗೆ ಹೋಗಬೇಕಾದರೆ, ತಮ್ಮ ಮುಖ ಸೇರಿದಂತೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಹಿಜಾಬ್ ಧರಿಸಿ ಹೋಗಬೇಕು ಎಂದು ಆದೇಶ ಹೊರಡಿಸಿದ್ದರು.

ಇದೀಗ ತಾಲಿಬಾನ್‍ನ ಸಚಿವಾಲಯವು ಇಸ್ಲಾಂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕಂದಹಾರ್ ನಗರದಾದ್ಯಂತ ಪೋಸ್ಟರ್‌ಗಳನ್ನು ಹಾಕಿದೆ. ಪೋಸ್ಟರ್‌ನಲ್ಲಿ ಮಹಿಳೆಯರ ದೇಹವನ್ನು ತಲೆಯಿಂದ ಕಾಲಿನವರೆಗೂ ಮುಚ್ಚಲ್ಪಡುವ ಬುರ್ಖಾಗಳ ಫೋಟೋಗಳನ್ನು ಕಾಣಬಹುದಾಗಿದೆ.

ಪೋಸ್ಟರ್ ಕೆಳಗಡೆ ಹಿಜಾಬ್ ಧರಿಸದ ಮುಸ್ಲಿಂ ಮಹಿಳೆಯರು ಪ್ರಾಣಿಗಳಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆಯಲಾಗಿದೆ. ಈ ಪೋಸ್ಟರ್‌ಗಳನ್ನು ಅನೇಕ ಕೆಫೆಗಳು, ಅಂಗಡಿಗಳ ಮೇಲೆ ಮತ್ತು ತಾಲಿಬಾನ್‍ನ ವಾಸ್ತವಿಕ ಶಕ್ತಿ ಕೇಂದ್ರವಾದ ಕಂದಹಾರ್‌ನಾದ್ಯಂತ ಜಾಹೀರಾತು ಹೋರ್ಡಿಂಗ್‍ಗಳ ಮೇಲೆ ಹಾಕಲಾಗಿದೆ. ಈ ಪೋಸ್ಟರ್ ಗಳು ಇದೀಗ ವೈರಲ್ ಆಗಿವೆ.

Leave A Reply

Your email address will not be published.