ಪೊಲೀಸ್ ಸಿಬ್ಬಂದಿಯ ಕೊರಳಪಟ್ಟಿ ಹಿಡಿದು ಎಳೆದಾಡಿದ ಕೈ ನಾಯಕಿ !! – ವೀಡಿಯೋ ವೈರಲ್

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಪರವಾಗಿ ತೆಲಂಗಾಣದಲ್ಲಿ ನಡೆದ ಕಾಂಗ್ರೆಸ್ ನಾಯಕರ ಪ್ರತಿಭಟನೆ ವೇಳೆ ಕೈ ನಾಯಕಿ ರೇಣುಕಾ ಚೌದರಿ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ಉದ್ಧಟತನ ತೋರಿರುವ ಘಟನೆ ನಡೆದಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್‌ನ ವಿರುದ್ಧ ಕಾಂಗ್ರೆಸ್ ಪಕ್ಷ ದೇಶದೆಲ್ಲೆಡೆ ಪ್ರತಿಭಟಿಸುತ್ತಿದೆ. ಈ ಸಂದರ್ಭ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಸಾರ್ವಜನಿಕವಾಗಿ ಹೀನ ಕೃತ್ಯ ಎಸಗಿದ್ದಾರೆ.

ಗುರುವಾರ ಹೈದರಾಬಾದ್‌ನಲ್ಲಿ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಇತರ ಕಾರ್ಯಕರ್ತರನ್ನು ಪೊಲೀಸ್ ಸಿಬ್ಬಂದಿ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ಒಬ್ಬರನ್ನು ಸಾರ್ವಜನಿಕವಾಗಿ ಕಾಲರ್‌ನಿಂದ ಹಿಡಿದುಕೊಂಡು ವಾಗ್ವಾದ ನಡೆಸಿದ್ದಾರೆ. ನಂತರ ಅವರನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನ್ ಗೆ ಎಳೆದೊಯ್ದಿದ್ದಾರೆ.

ಮೂಲಗಳ ಪ್ರಕಾರ, ಪೊಲೀಸರ ಕೊರಳಪಟ್ಟಿ ಹಿಡಿದಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಂಸದೆ ರೇಣುಕಾ ಚೌದರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ರೇಣುಕಾ ಚೌದರಿ ಅವರು, “ನಾನು ಹಲ್ಲೆ ಮಾಡಿಲ್ಲ, ನನ್ನ ಮೇಲೆ ಕೇಸ್ ಹಾಕಲಾಗಿದೆ, ನಾನು ಅದನ್ನು ಎದುರಿಸುತ್ತೇನೆ. ಅದು ಕಾನೂನು, ಆ ಯುವಕನ ವಿರುದ್ಧ ನನಗೇನೂ ಕೋಪ ಇಲ್ಲ. ಅವನು ನನಗೆ ಏನೂ ಮಾಡಿಲ್ಲ. ನಾನು ಸಮತೋಲನವನ್ನು ಕಳೆದುಕೊಂಡು ಆ ರೀತಿ ನಡೆದುಕೊಂಡೆ. ಅವರು ನನ್ನನ್ನು ತಳ್ಳುತ್ತಿದ್ದರು, ನನ್ನ ಕಾಲಿಗೆ ತೊಂದರೆಯಾಯಿತು. ಹೀಗಾಗಿ ನಾನು ನನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದೆ, ಹಾಗಾಗಿ ನಾನು ಸಿಬ್ಬಂದಿ ಮೇಲೆ ಎರಗಿದೆ. ಆದರೆ ನನ್ನ ವರ್ತನೆ ತಪ್ಪು ನಾನು ಆ ವ್ಯಕ್ತಿಗೆ ಕ್ಷಮೆಯಾಚಿಸುತ್ತೇನೆ. ಆದರೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪೊಲೀಸರು ನನ್ನಲ್ಲಿ ಕ್ಷಮೆಯಾಚಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದಾರೆ.

ಕಳೆದ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಎಂದು ಕೇಂದ್ರ ಸರ್ಕಾರವನ್ನು ಆರೋಪಿಸುತ್ತಿರುವ ಕಾಂಗ್ರೆಸ್ ಈಗ ದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದೆ.

Leave A Reply

Your email address will not be published.